ಬಿಜೆಪಿ ಸಂಸದ ವರುಣ್ ಗಾಂಧಿ ಜೀವಕ್ಕೆ ಭೂಗತ ಪಾತಕಿಗಳಿಂದ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಉನ್ನತದರ್ಜೆಗೆ ಏರಿಸಬೇಕೆಂದು ಬಿಜೆಪಿ ತಾಕೀತು ಮಾಡಿದೆ. ಆದರೆ ವರುಣ್‌ಗೆ ಚೋಟಾ ಶಕೀಲ್ ಗ್ಯಾಂಗಿನಿಂದ ಬೆದರಿಕೆಯಿಲ್ಲವೆಂದು ಗೃಹಸಚಿವಾಲಯ ವರದಿಯಲ್ಲಿ ಖಡಾಖಂಡಿತವಾಗಿ ಹೇಳಿದೆ. ವರುಣ್ ಪರ ವಕೀಲರ ಹತ್ಯೆಗೆ ಛೋಟಾ ಶಕೀಲ್ ನಿಖರ ಗುರಿಕಾರರು ಯೋಜಿಸಿದ್ದರೇ ಹೊರತು ವರುಣ್ ಹತ್ಯೆಗಲ್ಲ ಎಂದು ಸಮಜಾಯಿಷಿ ನೀಡಿದೆ.
ಆಂತರಿಕ ವೈರತ್ವವೇ ವರುಣ್ ವಕೀಲರ ಹತ್ಯೆ ಪ್ರಯತ್ನಕ್ಕೆ ಕಾರಣವೆಂದು ಗೃಹಸಚಿವಾಲಯ ತಿಳಿಸಿದೆ. ಆದರೆ ವರುಣ್ ಪ್ರಕರಣ ಕೈಗೆತ್ತಿಕೊಂಡ ವಕೀಲರ ಹತ್ಯೆಗೆ ಆಗಮಿಸಿದ್ದ ಛೋಟಾ ಶಕೀಲ್‌ನ 7 ಬಂಟರ ಬಂಧನವನ್ನು ಬಿಜೆಪಿ ಉಪನಾಯಕಿ ಸುಶ್ಮಾ ಸ್ವರಾಜ್ ಉಲ್ಲೇಖಿಸಿದ್ದಾರೆ. ವರುಣ್ ಗಾಂಧಿ ಸಂಸತ್ತಿನ ಗೌರವಾನ್ವಿತ ಸದಸ್ಯ, ಕುಖ್ಯಾತ ಭೂಗತ ಪಾತಕಿಗಳು ಅವರ ಹತ್ಯೆಗೆ ಪಿತೂರಿ ಮಾಡಿದ್ದಾರೆ.
3 ದಿನಗಳ ಹಿಂದೆ ಈ ಉದ್ದೇಶಕ್ಕಾಗಿ 7 ಮಂದಿ ದೆಹಲಿಗೆ ಆಗಮಿಸಿದ್ದಾಗ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದಾಗಿ ಹೇಳಿದ್ದಾರೆ. ವರುಣ್ ವಕೀಲರ ಹತ್ಯೆಗೆ ಈ ಬಂಟರು ಬಂದಿದ್ದು, ಯುವ ಸಂಸದನ ಹತ್ಯೆಗೆ ಯೋಜಿಸಿಲ್ಲವೆಂದು ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ ಆಶ್ಚರ್ಯಕರವಾಗಿದೆಯೆಂದು ಸುಶ್ಮಾ ಪ್ರತಿಕ್ರಿಯಿಸಿದ್ದಾರೆ. ವರುಣ್ ಗಾಂಧಿ ಈ ಕುರಿತು ಗೃಹಸಚಿವ ಚಿದಂಬರಂ ಅವರನ್ನು ಭೇಟಿ ಮಾಡಿದ್ದರೂ ಅವರು ತೃಪ್ತಿದಾಯಕ ಅಥವಾ ತಾರ್ಕಿಕ ಉತ್ತರ ನೀಡಿಲ್ಲವೆಂದು ಸುಶ್ಮಾ ಆರೋಪಿಸಿದ್ದಾರೆ. |