ಬೆಂಗಳೂರು, ಮಂಗಳೂರು ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ ಕುರಿತು ಪ್ರಕಟಿಸಿ, ಬಜೆಟಿನಲ್ಲಿ ಕರ್ನಾಟಕಕ್ಕೆ ಅನ್ಯಾಯವೆಸಗಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಕನ್ನಡಿಗರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದರೇ? ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರನ್ನು ನಂಬಬಹುದಾಗಿದ್ದರೆ ಇದಕ್ಕೆ ಉತ್ತರ 'ಹೌದು'.ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದು ಕೇವಲ ಒಂದು 'ಐಡಿಯಾ' ಅಷ್ಟೇ ಹೊರತು, ಕಾರ್ಯಾನುಷ್ಠಾನ ಸಾಧ್ಯವಿಲ್ಲ ಎಂದು ತಮ್ಮ ಅನುಭವದ ಆಧಾರದಲ್ಲಿ ಲಾಲು ಪ್ರಸಾದ್ ಘೋಷಿಸುವ ಮೂಲಕ ಇಲಿಗಳ ಮಧ್ಯೆ ಬೆಕ್ಕು ಹೊರಬಿಟ್ಟಿದ್ದಾರೆ.ಲೋಕಸಭೆಯಲ್ಲಿ ನಡೆದ ರೈಲ್ವೇ ಬಜೆಟ್ ಚರ್ಚೆ ಸಂದರ್ಭ ಮಂಗಳವಾರ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಾ ಲಾಲು ಈ ರೀತಿ ಹೇಳಿಕೆ ನೀಡಿರುವುದು ಪ್ರತಿಪಕ್ಷ ಬಿಜೆಪಿ ಕೈಗೆ ಒಳ್ಳೆ ಆಯುಧ ಕೊಟ್ಟಂತಾಗಿದ್ದು, ಲಾಲು "ಗಂಭೀರ" ಹೇಳಿಕೆಗಳು ಯುಪಿಎ ಸರಕಾರದ ಭರವಸೆಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದೆ ಎಂದು ಪ್ರತಿಕ್ರಿಯಿಸಲು ಕಾರಣವಾಗಿದೆ.ಯೋಜನೆಗಳ ಬಗ್ಗೆ ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸಂಸದ ಅನಂತ್ ಕುಮಾರ್, "ಸಬ್ ಕುಚ್ ಬಂಗಾಲ್, ಬಾಕೀ ಸಬ್ ಕಂಗಾಲ್" (ಎಲ್ಲವೂ ಬಂಗಾಳ, ಇತರರು ಕಂಗಾಲು) ಎಂದು ಟೀಕಿಸಿದರು. 309 ರೈಲು ನಿಲ್ದಾಣಗಳನ್ನು ಆದರ್ಶ ರೈಲು ನಿಲ್ದಾಣಗಳಾಗಿ ಪರಿವರ್ತಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದು, ಅದರಲ್ಲಿ 137 ನಿಲ್ದಾಣಗಳು ಕೂಡ ಬಂಗಾಳದಲ್ಲೇ ಇವೆ ಎಂದು ಅನಂತ್ ಎತ್ತಿ ತೋರಿಸಿದರು.ಮಧ್ಯೆ ಪ್ರವೇಶಿಸಿದ ಲಾಲು, 'ವರ್ಲ್ಡ್ ಕ್ಲಾಸ್ ಸ್ಟೇಶನ್ ಬನಾನಾ ಏಕ್ ಸೋಚ್ ಹೈ. ಯೇ ಬನಾ ತೋ ಹೈ ನಹೀಂ. ಆಪ್ ಪರಾಶಾನ್ ಕ್ಯೋಂ ಹೋ ರಹೇ ಹೈ? (ವಿಶ್ವದರ್ಜೆಗೆ ಏರಿಸುವುದು ಕೇವಲ ಒಂದು ಯೋಚನೆ. ಅದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ. ನೀವೇಕೆ ಚಿಂತೆ ಮಾಡಿಕೊಳ್ಳುತ್ತೀರಿ)' ಎಂದು ಪ್ರಶ್ನಿಸಿದರು.ನನ್ನ ಅವಧಿಯಲ್ಲಿ ಬಿಹಾರದ ಪಾಟ್ನಾ ನಿಲ್ದಾಣವನ್ನು ಕೂಡ ವಿಶ್ವದರ್ಜೆಗೇರಿಸುವುದಾಗಿ ಭರವಸೆ ನೀಡಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅವರು ಉದಾಹರಣೆ ಸಹಿತ ಹೇಳಿದಾಗ, ಸದನದಲ್ಲಿ ನಗೆಯ ಅಲೆ ಎದ್ದಿತು. ಸದನದ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಏನೋ ಹೇಳಿದ್ದನ್ನು ಅನಂತ್ ಕುಮಾರ್ ಗಟ್ಟಿಯಾಗಿ ಹೇಳಿದರು." ಲಾಲು ಅವರೇ ಈ ರೀತಿ ಒಪ್ಪಿಕೊಂಡ ಬಳಿಕ, ಇದರ ಬಗ್ಗೆ ಚರ್ಚೆಯೇ ಬೇಕಿಲ್ಲ ಎಂದು ಆಡ್ವಾಣೀಜಿ ಹೇಳುತ್ತಿದ್ದಾರೆ" ಎಂದರು ಅನಂತ್ ಕುಮಾರ್. ಲಾಲು ಅವರು ತಮ್ಮ ಅವಧಿಯಲ್ಲಿ ಮಂಡಿಸಿದ ಐದು ರೈಲ್ವೇ ಬಜೆಟ್‌ಗಳ ಮೇಲೂ ಪ್ರಶ್ನಾರ್ಥಕ ಚಿಹ್ನೆ ಇರಿಸಿದ್ದಾರೆ. ಅಂದರೆ ಅವರು ಕೇವಲ ಪೊಳ್ಳು ಭರವಸೆಗಳನ್ನಷ್ಟೇ ನೀಡಿದ್ದರು, ಏನನ್ನೂ ಅನುಷ್ಠಾನಗೊಳಿಸಿಲ್ಲ ಎಂಬುದನ್ನು ಇದು ತೋರಿಸುತ್ತದೆಯಾದುದರಿಂದ ಇದೊಂದು ಗಂಭೀರ ವಿಷಯ ಎಂದರು ಅನಂತ್.ಲಾಲು ಅವರನ್ನು ಅಂದು ಕೂಡ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಶ್ಲಾಘಿಸಿದ್ದರು ಎನ್ನುತ್ತಾ, ಚರ್ಚೆಗೆ ಪ್ರಧಾನಿಯನ್ನೂ ಎಳೆಯಲು ಪ್ರಯತ್ನಿಸಿದ ಅವರು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯತ್ತಲೂ ತೋರಿಸುತ್ತಾ, ಸೋನಿಯಾ ಕೂಡ ಸದನದಲ್ಲಿದ್ದರು, ಯುಪಿಎ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಚರ್ಚೆಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದ ಮಮತಾ ಎದ್ದುನಿಂತು, ಎಲ್ಲ ಪ್ರದೇಶಗಳ ಸದಸ್ಯರ ಅಹವಾಲುಗಳನ್ನು ಕೇಳಿ, ಅವರ ಬೇಡಿಕೆಗಳಿಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. |