ಪರಸ್ಪರ ಒಪ್ಪಿಗೆಯುಳ್ಳ ಸಲಿಂಗಕಾಮಕ್ಕೆ ಕಾನೂನು ಮಾನ್ಯತೆ ನೀಡಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಯೋಗ ಗುರು ಬಾಬಾ ರಾಮದೇವ ಅವರು ಬುಧವಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿದ್ದಾರೆ.ಈ ಕುರಿತ ಅರ್ಜಿಯನ್ನು ಬುಧವಾರ ಸಲ್ಲಿಸುವ ಸಾಧ್ಯತೆಯಿದೆ ಎಂದು ಬಾಬಾ ಅವರ ವಕೀಲರು ತಿಳಿಸಿದ್ದಾರೆ. ಮಂಗಳವಾರವೇ ಈ ಅರ್ಜಿ ಸಲ್ಲಿಸಬೇಕಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಮಾಡಲಾಗಲಿಲ್ಲ ಎಂದು ಬಾಬಾ ರಾಮದೇವ ಅವರ ವಕೀಲರಾದ ಸುರೇಶ್ ಶರ್ಮಾ ಮತ್ತು ಗಂಧರ್ವ ಮಕ್ಕರ್ ಹೇಳಿದ್ದಾರೆ.ದೆಹಲಿ ಹೈಕೋರ್ಟು ಜುಲೈ 2ರಂದು ನೀಡಿದ ತೀರ್ಪು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಲಿಂಗಕಾಮದ ಚಟುವಟಿಕೆಗಳು ಸಾಮಾಜಿಕ ನೈತಿಕತೆಗೆ ವಿರುದ್ಧ ಮಾತ್ರವೇ ಅಲ್ಲ, ಸಾರ್ವಜನಿಕ ಸ್ವಾಸ್ಥ್ಯ ಮತ್ತು ಆರೋಗ್ಯಕರ ವಾತಾವರಣಕ್ಕೆ, ಸಮಾಜದ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಬಾಬಾ ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸಲಿದ್ದಾರೆ ಎಂದು ವಕೀಲರು ತಿಳಿಸಿದರು.ಸ್ಪೇನ್‌ನ ಮನಃಶಾಸ್ತ್ರಜ್ಞ ಎನ್ರಿಕ್ ರೋಜಸ್ ಅವರನ್ನು ಉಲ್ಲೇಖಿಸುತ್ತಾ ಬಾಬಾ ಅವರು, ಸಲಿಂಗರತಿಯು ಗುಣಪಡಿಸಬಹುದಾದ ಒಂದು ರೋಗ ಎಂದು ಹೇಳಿದ್ದಾರೆ. ಸಲಿಂಗ ಕಾಮವೂ ಒಂದು ಜನ್ಮಜಾತ ರೋಗವಾಗಿದ್ದು ಇದನ್ನು ಯೋಗ, ಪ್ರಾಣಾಯಾಮ ಮತ್ತಿತರ ಔಷಧ ತಂತ್ರಗಳಿಂದ ಗುಣಪಡಿಸಬಹುದು ಎಂದು ಬಾಬಾ ವಾದಿಸುತ್ತಾರೆ.ಸಲಿಂಗಕಾಮವು ಮೂಲಭೂತ ಹಕ್ಕು ಎಂದು ತೀರ್ಪು ನೀಡಿ ಹೈಕೋರ್ಟು ತಪ್ಪು ಮಾಡಿದೆ, ಇದರಿಂದ ಸಲಿಂಗರತಿ ಚಟುವಟಿಕೆಗಳು ಹೆಚ್ಚಲಿದ್ದು, ದೇಶದ ಜನಸಂಖ್ಯೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಂದರೆ ಇದು ದೇಶದ ಜನಸಂಖ್ಯೆಯ ವೃದ್ಧಿಗೇ ತಡೆಯೊಡ್ಡಬಹುದು ಎಂದು ಬಾಬಾ ವಾದಿಸುತ್ತಾರೆ. |