ದೆಹಲಿಯ ಜಾಮಾ ಮಸೀದಿಯಲ್ಲಿ ದಶಕಗಳ ಕಾಲ ಶಾಹಿ ಇಮಾಮ್ ಆಗಿದ್ದ ಸಯೀದ್ ಅಬ್ದುಲ್ಲಾ ಬುಖಾರಿ ಅವರು ಬುಧವಾರ ವಿಧಿವಶರಾಗಿದ್ದಾರೆ. ಅವರಿಗೆ ಮರಣಕಾಲಕ್ಕೆ 87 ವರ್ಷ ವಯಸ್ಸಾಗಿತ್ತು.
ಅಬ್ದುಲ್ಲಾ ಬುಖಾರಿ ಅವರು ತನ್ನ ಪುತ್ರ ಸಯೀದ್ ಅಹ್ಮದ್ ಬುಖಾರಿ ಅವರನ್ನು 2000 ಇಸವಿಯಲ್ಲೇ ಶಾಹಿ ಇಮಾಮ್ ಆಗಿರಿಸಿದ್ದರೂ, 17 ಶತಮಾನದಲ್ಲಿ ಮೊಗಲ್ ದೊರೆ ಶಹಜಾನ್ ಕಟ್ಟಿಸಿರುವ ಮಸೀದಿಯ ಶಾಹಿ ಇಮಾಮ್ ಪದವಿಯನ್ನು ತನ್ನೊಂದಿಗೆ ಉಳಿಸಿಕೊಂಡಿದ್ದರು.
ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದ ಬುಖಾರಿ ಅವರನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿದ್ದು, ಅವರು ಅವರು ಅಲ್ಲಿ ಕೊನೆಯುಸಿರೆಳೆದರೆಂದು ಜಾಮಾ ಮಸೀದಿಯ ವಕ್ತಾರ ಅಮಾನುಲ್ಲಾ ಖಾನ್ ಅವರು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಜನಿಸಿ ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿದ ಬುಖಾರಿ ಅವರು 1946ರಲ್ಲಿ ನಾಯಿಬ್ ಶಾಹಿ ಇಮಾಮ್ ಆಗಿದ್ದರು. 1977ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಅವರು ರಾಷ್ಟ್ರೀಯವಾಗಿ ಪ್ರಸಿದ್ಧಿಗೆ ಬಂದಿದ್ದರು. ಕಾಂಗ್ರೆಸ್ ಸರ್ಕಾರವು ಒತ್ತಾಯ ಪೂರ್ವಕವಾಗಿ ಹಳೆಯ ದೆಹಲಿ ಪ್ರದೇಶಗಳಲ್ಲಿ ಸಂತಾನ ಹರಣ ಶಸ್ತ್ರಕ್ರಿಯೆ ನಡೆಸುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ವಿರುದ್ಧ ಅವರು ಪ್ರಚಾರ ನಡೆಸಿದ್ದರು.
ಅವರು ಬಾಬ್ರಿ ಮಸೀದಿ ಬೆಂಬಲಿಸಿ ಸಕ್ರಿಯ ಪಾತ್ರ ವಹಿಸಿದ್ದರು. ಆದರೆ ಅವರ ಹೋರಾಟವು 1992ರಲ್ಲಿ ಮಸೀದಿ ಧ್ವಂಸವಾದ ಬಳಿಕ ತೆರೆಮರೆಗೆ ಸರಿದಿತ್ತು. |