ದೇವಾಲಯ ನಗರಿ ಮಧುರೈ ಚೀನಿಂಡಿಯಾ ವಿವಾಹವೊಂದಕ್ಕೆ ಸಾಕ್ಷಿಯಾಯಿತು. ಸ್ಥಳೀಯ ಯೋಗ ಶಿಕ್ಷಕ ಶಿವಾನಂದಮ್ ಅವರು ಚೀನದ ಯೋಗ ತಜ್ಞೆ ಉಚಿನ್ ಮೇಯಿ ಎಂಬವರಿಗೆ ತಾಳಿ ಕಟ್ಟಿ ಸಪ್ತಪದಿ ತುಳಿದರು.
ಲಕ್ಷ್ಮಿ ಎಂಬುದಾಗಿ ಮರುನಾಮಕರಣಗೊಂಡ 26ರ ಹರೆಯದ ಮೇಯಿ 25ರ ಹರೆಯದ ಶಿವಾನಂದಮ್ ಅವರ ಪ್ರೇಮಪಾಶಕ್ಕೆ ಸಿಲುಕಿದ್ದರು. ಶಿವಾನಂದಮ್ ಅವರು ಮೇಯಿ ತವರೂರಾದ ಗೌನ್‌ಗ್ಜೋವು (ಹಾಂಕಾಂಗ್‌ನಿಂದ 120 ಕಿಮಿ ವಾಯುವ್ಯಕ್ಕೆ) ಎಂಬಲ್ಲಿಗೆ ಯೋಗ ಪ್ರಚಾರಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಪ್ರವಾಸ ತೆರಳಿದ್ದಾಗ ಅಸ್ವಸ್ಥರಾಗಿದ್ದರು. ಆ ವೇಳೆ ಮೇಯಿ, ಶಿವಾನಂದಮ್ ಅವರನ್ನು ಉಪಚರಿಸಿದ್ದು ಅವರೊಳಗೆ ಪ್ರೀತಿ ಅಂಕುರವಾಗುವಾಗುವಂತೆ ಮಾಡಿತ್ತು.
ನಾಲ್ಕು ವರ್ಷಗಳ ಒಡನಾಟದ ಬಳಿಕ ಅವರು 'ಚೀನಿಂಡಿಯಾ' ವಿವಾಹಕ್ಕೆ ನಿರ್ಧರಿಸಿದ್ದರು. ಚೀನಿಂಡಿಯಾ ಎಂಬ ಶಬ್ದವನ್ನು ಹುಟ್ಟು ಹಾಕಿರುವುದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್. ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳಾದ ಭಾರತ ಮತ್ತು ಚೀನಗಳು ಪರಸ್ಪರ ಸುದೃಢತೆಗಾಗಿ ಜನತೆ-ಜನತೆಯ ಸಂಪರ್ಕ ಕುರಿತು ಕಾರ್ಯವೆಸಗುವ ಕುರಿತಂತೆ ಅವರು 2005ರಲ್ಲಿ 'ಮೇಕಿಂಗ್ ಸೆನ್ಸ್ ಆಫ್ ಚೀನಿಂಡಿಯಾ' ಎಂಬ ಪುಸ್ತಕ ಬರೆದಿದ್ದರು. |