ಗಂಡು-ಹೆಣ್ಣು ದಾಂಪತ್ಯ ನಡೆಸುವ ಕಾಲ ಹೋಗಿದೆ. ವಿದೇಶಗಳಲ್ಲಿ ಹೆಚ್ಚಾಗಿ ಅಧಿಕೃತವಾಗಿ ಕಾಣಿಸಿಕೊಳ್ಳುತ್ತಿದ್ದ ಹೊಸ ಸಂಬಂಧ ಈಗ ಭಾರತದಲ್ಲಿಯೂ ಪ್ರಚಲಿತವಾಗುತ್ತಿದೆ. ಈಗ ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣುಗಳು ಸತಿ-ಪತಿಗಳು. ಪರಸ್ಪರ ಒಪ್ಪಿಗೆಯ ಸಲಿಂಗ ಸಂಬಂಧಕ್ಕೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಕಾನೂನು ಮಾನ್ಯತೆ ನೀಡಿದಂದಿನಿಂದ ಭಾರತದಲ್ಲಿ ಈ ಕುರಿತ ಚರ್ಚೆಗೆ ಮತ್ತೆ ಗ್ರಾಸ ದೊರಕಿದ್ದು, ಚಂಡೀಗಢದಲ್ಲಿ ಮೂರು ಸಲಿಂಗ 'ದಂಪತಿ'ಗಳು ವಿವಾಹಬಂಧನಕ್ಕೆ ಸಿಲುಕಿಕೊಂಡಿದ್ದಾರೆ.
ಚಂಡೀಗಢದಿಂದ 20 ಕಿ.ಮೀ. ದೂರದಲ್ಲಿರುವ ಪಂಚಕುಳದ ಮಾನಸದೇವಿ ಮಂದಿರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ 'ನವ ದಂಪತಿಗಳು', ತಮ್ಮಂತೆಯೇ ಈ ನಗರದಲ್ಲಿ ಇನ್ನೂ ಸಾಕಷ್ಟು ಮಂದಿ ಗಂಡುಗಳು ಮತ್ತು ಹೆಣ್ಣುಗಳಿದ್ದು, ಅವರು ಸಾಮಾಜಿಕ ಒತ್ತಡದಿಂದಾಗಿ ಇಂಥದ್ದೊಂದು ಕಾರ್ಯಕ್ರಮಕ್ಕೆ ಮುಂದೆ ಬರುತ್ತಿಲ್ಲ ಎಂದಿದ್ದಾರೆ.
ಮನೋಜ್ (25) ಮತ್ತು ರಾಮ ಕುಮಾರ್ (24) ಎಂಬಿಬ್ಬರು ಸತಿ-ಪತಿ ಅಲ್ಲಲ್ಲ, ಪತಿ-ಪತಿಗಳಾಗಿದ್ದು, ತಮ್ಮ 'ಮದುವೆ'ಗೆ ದೇವಿಯ ಆಶೀರ್ವಾದ ಬೇಡಲು ಅವರು ಈ ಮಂದಿರಕ್ಕೆ ಬಂದಿದ್ದಾರಂತೆ. ಕಳೆದ ಎಂಟು ವರ್ಷಗಳಿಂದ ತಾವಿಬ್ಬರೂ ಇಲ್ಲಿನ ಸ್ಲಂ ಒಂದರಲ್ಲಿ ಒಟ್ಟಿಗೇ ವಾಸಿಸುತ್ತಿದ್ದುದಾಗಿ ಅವರು ಹೇಳಿದ್ದಾರೆ.
ವಾಸ್ತವವಾಗಿ ನಾಲ್ಕು ವರ್ಷಗಳ ಹಿಂದೆಯೇ ದೇವಸ್ಥಾನವೊಂದರಲ್ಲಿ ನಾವು 'ವಿವಾಹ'ವಾಗಿದ್ದೆವು. ಆದರೆ ಸಮಾಜದ ಭಯದಿಂದಾಗಿ ಅದನ್ನು ಮುಚ್ಚಿಟ್ಟಿದ್ದೆವು. ಆದರೆ ಈಗ ದೆಹಲಿ ಹೈಕೋರ್ಟು ನಮ್ಮ ಸಂಬಂಧಕ್ಕೆ ಮಾನ್ಯತೆ ನೀಡಿದೆ. ಭಯ ಪಡುವಂಥದ್ದೇನಿಲ್ಲ ಎಂದಿದ್ದಾರೆ ಮನೋಜ್.
ಮತ್ತೊಬ್ಬ 'ದಂಪತಿ' ಜರ್ನೈಲ್ ಸಿಂಗ್ ಮತ್ತು ದೀಪ್. ದೀಪ್‌ಗೆ ಸಪ್ನಾ ಸಿಂಗ್ ಎಂದು ಮರುನಾಮಕರಣ ಮಾಡಲಾಗಿದೆ. ಐದು ವರ್ಷಗಳಿಂದ ಅವರದು ಪರಸ್ಪರ ಪರಿಚಯವಂತೆ, ಅದು ಪ್ರೇಮಕ್ಕೆ ತಿರುಗಿ ಈಗ ವಿವಾಹವಾಗಿದ್ದಾರೆ.
ನಮ್ಮ ಹೆತ್ತವರಿಗೆ ನಮ್ಮ ಸಂಬಂಧದ ಬಗ್ಗೆ ಗೊತ್ತಿದೆ. ಆದರೆ ಅವರು ಈ ವಿವಾಹಕ್ಕೆ ಹಾಜರಾಗಲಿಲ್ಲ ಎಂದಿದ್ದಾರೆ ಜರ್ನೈಲ್.
ಮೂರನೇ ದಂಪತಿ ತಮ್ಮ ಹೆಸರು, ಗುರುತು ಹೇಳಲು ಇಚ್ಛಿಸಲಿಲ್ಲ. ಆದರೆ, ಬೇರೆ ಸಲಿಂಗಿಗಳು ಕೂಡ ತಮ್ಮಂತೆಯೇ ಧೈರ್ಯ ತೋರಿಸಿ ಮದುವೆಯಾಗಲು ಮುಂದೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈಗ ಈ ಜೋಡಿಗಳು ಹೊಸ ಬಾಳಿನ ಹೊಸಿಲಲಿ ನಿಂತಿದ್ದಾರೆ. ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು ಈ ಶುಭವೇಳೆಯಲಿ ಎನ್ನುತ್ತಿದ್ದಾರೆ. ಇದರೊಂದಿಗೆ, ಇದು ಬ್ರಹ್ಮನು ಬೆಸೆದ ಅನುಬಂಧ, ಅನುಗಾಲವು ನೀಡಲಿ ಆನಂದ ಎನ್ನುತ್ತಾ ಗುನುಗುನಿಸುತ್ತಿದ್ದಾರೆ. |