ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯವೊಂದು ಗುರುವಾರ ತಳ್ಳಿಹಾಕಿದೆ.2008 ರಲ್ಲಿ ನಡೆದಿರುವ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಪ್ರಜ್ಞಾ, ಅಭಿಯೋಜಕರು ಸಂಘಟಿತ ಅಪರಾಧಗಳ ಮಹಾರಾಷ್ಟ್ರ ನಿಯಂತ್ರಣ ಕಾಯ್ದೆ(ಮೋಕಾ)ಯ ಕೆಲವು ಅನುಬಂಧಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದು, ಅವರ ಈ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.ಜನವರಿಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಪ್ರಜ್ಞಾ ಅವರು, ಅಭಿಯೋಜಕರು ನಿಗದಿತ 90 ದಿನಗಳೊಳಗಾಗಿ ಆರೋಪಪಟ್ಟಿಸಲ್ಲಿಸುವಲ್ಲಿ ವಿಫಲವಾಗಿರುವ ಕಾರಣ ತಾನು ಜಾಮೀನಿಗೆ ಅರ್ಹರೆಂದು ಅವರು ವಾದಿಸಿದ್ದರು." ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ದಳವು ತನ್ನ ಪ್ರಗತಿ ವರದಿಯನ್ನು ಪ್ರಜ್ಞಾ ಜೈಲಿನಲ್ಲಿ 95 ದಿನಗಳನ್ನು ಕಳೆದ ಬಳಿಕ ಸಲ್ಲಿಸಿದೆ. ಪ್ರಜ್ಞಾರ ಬಂಧನದ ದಿನಾಂಕವನ್ನು ಎಟಿಎಸ್ ಅಕ್ಟೋಬರ್ 23 ಎಂದು ತೋರಿಸಿದ್ದರೂ, ಅವರನ್ನು ಅಕ್ಟೋಬರ್ 10ರಂದೇ ಬಂಧಿಸಿದ್ದು, 10 ದಿನಗಳ ಕಾಲ ಕಾನೂನುಬಾಹಿರವಾಗಿ ವಶದಲ್ಲಿರಿಸಿಕೊಂಡಿತ್ತು. ಹೀಗಾಗಿ ಅವರು ಜಾಮೀನಿಗೆ ಅರ್ಹರು" ಎಂಬುದಾಗಿ ಪ್ರಜ್ಞಾಪರ ವಕೀಲ ಗಣೇಶ್ ಸೋವಾನಿ ವಾದಿಸಿದ್ದರು.ಮೋಕಾ ಕಾಯ್ದೆಯಡಿ, ಬಂಧನದ 90ದಿನಗಳೊಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು. ವಿಫಲವಾದಲ್ಲಿ ಈ ನಿಗದಿತ ಅವಧಿಯೊಳಗೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಿ ಆರೋಪಪಟ್ಟಿ ಸಲ್ಲಿಕೆಯ ಅವಧಿಯನ್ನು 180 ದಿನಗಳಿಗೆ ವಿಸ್ತರಿಸಬಹುದಾಗಿದೆ.ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ರೋಹಿಣಿ ಸಾಲ್ಯಾನ್ ಅವರು ಡಿಫೆನ್ಸ್ ವಕೀಲರ ವಾದವನ್ನು ವಿರೋಧಿಸಿದ್ದು, ಪ್ರಜ್ಞಾರನ್ನು ಅಕ್ಟೋಬರ್ 23ರಂದು ಬಂಧಿಸಲಾಗಿದ್ದು, ಎಟಿಎಸ್ 89ನೆ ದಿನ ತನ್ನ ವರದಿಯನ್ನು ಸಲ್ಲಿಸಿರುವ ಕಾರಣ ಕಾನೂನಿನ ಯಾವುದೇ ಅನುಬಂಧದ ಉಲ್ಲಂಘನೆಯಾಗಿಲ್ಲ ಎಂದು ವಾದಿಸಿದರು.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಾಲೆಗಾಂವ್‌ನಲ್ಲಿ ನಡೆಸಿರುವ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಜ್ಞಾ ಹಾಗೂ ಇತರ 10 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಲೆಫ್ಟಿನೆಂಟ್ ಕರ್ನಲ್ ಎಸ್.ಪಿ. ಪುರೋಹಿತ್ ಅವರೂ ಸೇರಿದ್ದಾರೆ. ಸ್ಫೋಟದಲ್ಲಿ ಆರು ಮಂದಿ ಸತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. |