ಇಪ್ಪತ್ತೊಂದನೆ ಶತಮಾನದ ಅತ್ಯಂತ ಸುದೀರ್ಘ ಸೂರ್ಯಗ್ರಹಣ ಜುಲೈ 22ರ ಅಮಾವಾಸ್ಯೆಯ ದಿನದಂದು ಸಂಭವಿಸಲಿದ್ದು, ಈ ಅಪರೂಪದ ಬ್ರಹ್ಮಾಂಡ ವಿಸ್ಮಯದ ದೃಶ್ಯವೀಕ್ಷಣೆಯ ಅವಕಾಶವು ಪಶ್ಚಿಮ, ಕೇಂದ್ರ, ಪೂರ್ವ ಹಾಗೂ ಈಶಾನ್ಯ ಭಾರತದ ಜನತೆಗೆ ಲಭಿಸಲಿದೆ.
ಗ್ರಹಣದ ಆಂಶಿಕ ಭಾಗವು ರಾಷ್ಟ್ರಾದ್ಯಂತ ಗೋಚರವಾಗಲಿದೆ ಎಂದು ಪಿ. ಬಿರ್ಲಾ ತಾರಾಲಯದ ನಿರ್ದೇಶಕ ಡಿ.ಪಿ. ದುರೈ ಹೇಳಿದ್ದಾರೆ.
ಭಾರತೀಯ ಕಾಲಮಾನದ ಮುಂಜಾನೆ ಐದು ಗಂಟೆ 28 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಕ್ಯಾಂಬೆ ಕೊಲ್ಲಿಯ ಪಶ್ಚಿಮ ಕರಾವಳಿಗೆ ನಿಕಟವಾಗಿ ಅರಬ್ಬಿ ಸಮುದ್ರದಲ್ಲಿ ಸ್ಥಳೀಯ ಸೂರ್ಯೋದಯಕ್ಕೆ ಸರಿಯಾಗಿ ಚಂದ್ರನ ಛಾಯೆ ಭೂಮಿಯನ್ನು ಸ್ಪರ್ಶಿಸುತ್ತಲೇ ಗ್ರಹಣ ಆರಂಭವಾಗುತ್ತದೆ ಎಂದು ದುರೈ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಚಂದ್ರನ ಛಾಯೆಯು ಭೂಮಿಯನ್ನು ಬಿಡುತ್ತಲೇ ಸ್ಥಳೀಯ ದಕ್ಷಿಣ ಫೆಸಿಫಿಕ್ ಸಮುದ್ರದಲ್ಲಿ ಸೂರ್ಯಾಸ್ತವಾಗುತ್ತಲೇ ಗ್ರಹಣವು ಭಾರತೀಯ ಕಾಲಮಾನ 10 ಗಂಟೆ 42 ನಿಮಿಷಕ್ಕೆ ಸರಿಯಾಗಿ ಕೊನೆಗೊಳ್ಳಲಿದೆ. ಗುಜರಾತಿನ ದಕ್ಷಿಣ ಕರಾವಳಿಯಲ್ಲಿ ಸೂರ್ಯೋದಯವಾಗುತ್ತಲೇ ಕಂಭತ್ ಕೊಲ್ಲಿಯಲ್ಲಿ ಸುಮಾರು ಆರು ಗಂಟೆ 23 ನಿಮಿಷಕ್ಕೆ ಗ್ರಹಣದ ಮಧ್ಯ ಮಾರ್ಗವು ಭೂಮಿಯನ್ನು ಸ್ಫರ್ಷಿಸಲಿದೆ ಎಂದು ಅವರು ಹೇಳಿದ್ದಾರೆ. ಇದರ ಒಟ್ಟು ಸಮಯ ಮೂರು ನಿಮಿಷ 30 ಸೆಕುಂಡು.
ಛಾಯೆಯು, ಕೇಂದ್ರ ಭಾರತ, ಆಗ್ನೇಯ ನೇಪಾಳ, ಉತ್ತರ ಬಂಗಾಳ, ಸಿಕ್ಕಿಂನ ದಕ್ಷಿಣ ಭಾಗ, ಭೂತಾನ್ ಮತ್ತು ಬಾಂಗ್ಲಾ ದೇಶದ ವಾಯುವ್ಯ ತುದಿಯನ್ನು ದಾಟಲಿದೆ. ಅಸ್ಸಾಂ, ಅರುಣಾಚಲ ಪ್ರದೇಶವನ್ನು ಸ್ಪರ್ಷಿಸಿದ ನಂತರ ಛಾಯೆಯು ಮ್ಯಾನ್ಮಾರ್ ಸ್ಪರ್ಷಿಸಿ ಬಳಿಕ ಚೀನಕ್ಕೆ ಪ್ರವೇಶಿಸಲಿದೆ.
ಉತ್ತರ ಫೆಸಿಫಿಕ್ ಸಮುದ್ರದಲ್ಲಿ ಭಾರತೀಯ ಕಾಲಮಾನ ಎಂಟು ಗಂಟೆ ಐದು ನಿಮಿಷಕ್ಕೆ ಛಾಯೆಯು ಆರು ನಿಮಿಷ 44 ಸೆಕುಂಡುಗಳ ಕಾಲ ಹಾಯಲಿದೆ. ಇಲ್ಲಿ ಛಾಯೆ ಹಾದಿಯ ಅಗವು 258 ಕಿಲೋಮೀಟರ್ ಆಗಿರುತ್ತದೆ.
ಮುಂದಿನ ಸೂರ್ಯ ಗ್ರಹಣವು 2010ರ ಜನವರಿ 15ರಂದು ಸಂಭವಿಸಲಿದೆ. |