ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹಾಗೂ ಇತರ ದಲಿತ ನಾಯಕರ ಪ್ರತಿಮೆಗಳನ್ನು ನೋಯ್ಡಾ ಉದ್ಯಾನವನದಲ್ಲಿ ಅನಾವರಣಗೊಳಿಸುವ ವಿಚಾರವನ್ನು ನಿಲ್ಲಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಖ್ಯನ್ಯಾಯಾಧೀಶ ಕೆ.ಜಿ ಬಾಲಕೃಷ್ಣ ಹಾಗೂ ನ್ಯಾಯಮೂರ್ತಿ ಪಿ. ಸದಾಶಿವನ್ ಅವರನ್ನೊಳಗೊಂಡ ನ್ಯಾಯಪೀಠವು ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಹೇಳಿದೆ.
"ಪ್ರತಿಮೆ ಅನಾವರಣವನ್ನು ಸಂಪುಟವು ಅಂಗೀಕರಿಸಿದ್ದರೆ ನಾವು ಏನೂ ಮಾಡುವಂತಿಲ್ಲ. ಭ್ರಷ್ಟಾಚಾರ ಅಥವಾ ನಿಧಿದುರ್ಬಳಕೆ ನಡೆದಿದ್ದರೆ ದೂರು ನೀಡಿ" ಎಂಬುದಾಗಿ ರವಿಕಾಂತ್ ಎಂಬ ವಕೀಲರು ಸಲ್ಲಿಸಿರುವ ಮೊಕದ್ದಮೆಯ ವಿಚಾರಣೆಗೆ ನಿರಾಕರಿಸುತ್ತಾ ನ್ಯಾಯಪೀಠ ಹೇಳಿದೆ.
ದೆಹಲಿ ಸಮೀಪದ ನೋಯ್ಡಾದ ಸೆಕ್ಟರ್ 15ಎಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮಾಯಾವತಿ, ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸುತ್ತಿದೆ.
ಈ ಪ್ರದೇಶದ ನಿವಾಸಿಗಳು ಮತ್ತು ಪರಿಸರವಾದಿಗಳು ಇದು ಹಸಿರು ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುತ್ತಿದ್ದಾರೆ.
ಇದೀಗ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ನಿರಾಕರಿಸಿರುವುದು ಮಾಯಾವತಿ ಅವರಿಗೆ ನೆಮ್ಮದಿ ನೀಡಿದೆ. ಲಕ್ನೋ ಮತ್ತು ನೋಯ್ಡಾಗಳಲ್ಲಿ ಮಾಯಾವತಿ ಪ್ರತಿಮೆಗಳನ್ನು ಸ್ಥಾಪಿಸುತ್ತಿರುವುದು ವಿಪಕ್ಷಗಳು ಹಾಗೂ ಇತರರಿಂದ ವ್ಯಾಪಕ ಟೀಕೆಗೆ ಕಾರಣವಾಗಿದೆ. ಉತ್ತರ ಪ್ರದೇಶದಾದ್ಯಂತ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ 2,000ಕೋಟಿಗಿಂತಲೂ ಅಧಿಕ ಮೊತ್ತವನ್ನು ಬಳಸಲಾಗುತ್ತಿದೆ ಎಂದು ಆಪಾದಿಸಲಾಗಿದೆ.
|