ತಮ್ಮದಲ್ಲದ ತಪ್ಪಿಗೆ ಲಾಥೂರಿನ ಈ ಮಕ್ಕಳು ಭಾರೀ ಬೆಲೆ ತೆರಬೇಕಾಗಿದೆ. ಇವರು ಎಚ್ಐವಿ ಪೀಡಿತರು. ಎಚ್‌ಐವಿ ಬಾಧಿತ ಮಕ್ಕಳು ಇರುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಇತರೇ ವಿದ್ಯಾರ್ಥಿಗಳ ಹೆತ್ತವರು ಪಟ್ಟು ಹಿಡಿದ ಕಾರಣ ಈ ಮಕ್ಕಳನ್ನು ಶಾಲೆ ತೊರೆಯುವಂತೆ ಮಾಡಲಾಗಿರುವ ಆಘಾತಕಾರಿ ವಿಚಾರ ವರದಿಯಾಗಿದೆ.
ಲಾಥೂರಿನ ಹೊಸೆಗಾಂವ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ದಾಖಲಾಗಿರುವ ಎಚ್ಐವಿ ಪೀಡಿತ ಮಕ್ಕಳು ತಾವಾಗಿಯೇ ಶಾಲೆ ತೊರೆಯುವಂತೆ ಹೇಳಲಾಗಿದೆ ಎನ್ನಲಾಗಿದೆ.
ಸುಮಾರು 320 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ 150ಕ್ಕೂಅಧಿಕ ಮಕ್ಕಳು ಕಳೆದ ಕೆಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸುತ್ತಾ, ಈ ಮಕ್ಕಳು ಶಾಲೆತೊರೆಯುವಂತೆ ಹೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅವರ ಹೆತ್ತವರ ಬೆಂಬಲವಿದೆ. ಇದಲ್ಲದೆ ಕೆಲವು ಹೆತ್ತವರು ತಮ್ಮ ಮಕ್ಕಳ ವರ್ಗಾವಣೆ ಪತ್ರಕ್ಕೂ ಅರ್ಜಿಸಲ್ಲಿಸಿದ್ದಾರೆ.
ಎಚ್ಐವಿ ಪೀಡತ ಮಕ್ಕಳ ಸನಿಹದಲ್ಲಿ ಕುಳಿತರು ಇದು ತಮಗೂ ಅಂಟಬಹುದು ಎಂಬ ಮೌಢ್ಯವೇ ವಿದ್ಯಾರ್ಥಿಗಳ ಈ ವರ್ತನೆಗೆ ಕಾರಣ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳುತ್ತಾರೆ. ಕಳೆದ ಮೂರು ದಿನಗಳಿಂದ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗೈರುಹಾಜರಾಗಿದ್ದಾರೆ.
ತಮ್ಮಮಕ್ಕಳು ಸೋಂಕು ಪೀಡಿತ ಮಕ್ಕಳೊಂದಿಗೆ ಜಗಳವೇನಾದರೂ ಆಡುತ್ತಾ ಅವರು ಕಚ್ಚಿಬಿಟ್ಟಲ್ಲಿ ಸೋಂಕು ತಗಲುವ ಸಂಭವ ಇರುವುದು ಹೆತ್ತವರ ಕಳವಳಕ್ಕೆ ಕಾರಣ ಎಂದು ಲಾಥುರ್ ಶೈಕ್ಷಣಿಕ ಅಧಿಕಾರಿ ವಿಲಾಸ್ ಜೋಷಿ ಹೇಳಿದ್ದಾರೆ.
ಅದಾಗ್ಯೂ, ಶಾಲಾಡಳಿತದ ಈ ನಿರ್ದಯದ ಕ್ರಮವನ್ನು ಎನ್‌ಜಿಓಗಳು ತೀವ್ರವಾಗಿ ಖಂಡಿಸಿವೆ. ಎಚ್ಐವಿ ಸೋಂಕು ಪೀಡಿತರೆಂಬ ಕಾರಣಕ್ಕೆ ಅವರನ್ನು ಶಾಲೆತೊರೆಯುವಂತೆ ಹೇಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಸಹ್ಯೋಗ್ ಟ್ರಸ್ಟಿನ ಕಾರ್ಯದರ್ಶಿ ಹೇಳುತ್ತಾರೆ. ಅಲ್ಲದೆ ಈ ಕುರಿತು ಮಕ್ಕಳು ಮತ್ತು ಹೆತ್ತವರಲ್ಲಿ ಅರಿವು ಮೂಡಿಸುವಲ್ಲಿ ಶಾಲಾಡಳಿತ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.
|