ಮುಂಬೈದಾಳಿ ನಡೆಸಿರುವ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಪಾಕಿಸ್ತಾನ ನೌಕಾದಳದ ಪ್ರಮುಖ ಘಟಕವಾದ ಪಾಕಿಸ್ತಾನ ಮೆರೈನ್ ತರಬೇತಿ ನೀಡಿತ್ತು ಎಂಬುದಾಗಿ ವರದಿಯೊಂದು ತಿಳಿಸಿದೆ.
ಕಸಬ್ ಮತ್ತು ಆತನೊಂದಿಗೆ ದಾಳಿನಡೆಸಲು ಆಗಮಿಸಿದ್ದ ಇತರ ಒಂಬತ್ತು ಮಂದಿಗೆ ಯುದ್ಧತಂತ್ರಗಳನ್ನು ಪಾಕಿಸ್ತಾನ್ ಮೆರೈನ್ ಹೇಳಿಕೊಟ್ಟಿತ್ತು ಎಂಬುದಾಗಿ ದಿ ವೀಕ್ ಪತ್ರಿಕೆಯ ಇತ್ತೀಚಿನ ಆವೃತ್ತಿಯು ತನಿಖಾ ಸಂಸ್ಥೆಯು ಹೇಳಿರುವುದಾಗಿ ವರದಿ ಮಾಡಿದೆ. ಉಗ್ರಗಾಮಿ ಸಂಘಟನೆ ಲಷ್ಕರೆ-ಇ-ತೋಯ್ಬಾ ತನ್ನ ವಿವಿಧ ಶಿಬಿರಗಳಲ್ಲಿ ತರಬೇತಿ ನೀಡಿದ ಬಳಿಕ ಪಾಕಿಸ್ತಾನದ ನೌಕಾದಳ ತರಬೇತಿ ನೀಡಿತ್ತು.
ವಿಚಕ್ಷಣೆ, ಭೌಗೋಳಿಕ ನಕ್ಷೆಗಳ ಅಧ್ಯಯನ, ನುಸುಳಿಕೊಳ್ಳುವುದು, ನಗರಗಳಲ್ಲಿ ಯುದ್ಧ ಹಾಗೂ ಅಪಹರಣದ ಕುರಿತು ಉಗ್ರರಿಗೆ ತರಬೇತು ನೀಡಲಾಗಿತ್ತು ಎಂದು ಅದು ತಿಳಿಸಿದೆ.
ದಾಳಿಗೆ ಮುಂಚಿತವಾಗಿಯೇ ಉಗ್ರರು ತಮ್ಮ ಗುರಿಗಳ ಸಮಗ್ರ ಪರಿಚಯ ಮಾಡಿಕೊಂಡಿದ್ದರು ಎಂಬುದಾಗಿ ತನಿಖಾಗಾರರು ಯೋಚಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ. ಉಗ್ರರ ತಂಡದ ನಾಯಕನಾಗಿದ್ದ ಇಸ್ಮಾಯಿಲ್ ಸ್ಥಳೀಯ ಶಕ್ತಿಗಳೊಂದಿಗೆ ಸೇರಿ ತನ್ನ ಗುರಿಯ ಪರಿವೀಕ್ಷಣೆ ಮಾಡಿರಬಹುದು ಎಂಬುದಾಗಿ ರೀಸರ್ಚ್ ಮತ್ತು ಅನಾಲಿಸಿಸ್ ದಳದ ಹಿರಿಯ ಅಧಿಕಾರಿಯೊಬ್ಬರು ಊಹಿಸಿರಬಹುದಾಗಿ ಹೇಳಲಾಗಿದೆ.
ತರಬೇತಿಗೆ ಮುಂಚಿತವಾಗಿ ಕ್ಷಿಪ್ರವಾಗಿ ಸಮುದ್ರದಲ್ಲಿ ಸುತ್ತಾಡಿಸಲಾಗಿತ್ತು ಎಂದು ಕಸಬ್ ತನಿಖಾದಾರರಿಗೆ ತಿಳಿಸಿದ್ದಾನೆ. |