ಬಲಿಪಶುವಿನ ಗುಪ್ತಾಂಗಗಳಲ್ಲಿ ಗಾಯಗಳಿಲ್ಲದಿದ್ದರೂ ಅತ್ಯಾಚಾರ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಬಹುದಾಗಿದ್ದು ಇದು ಪರಸ್ಪರ ಒಪ್ಪಿತ ಲೈಂಗಿಕ ಕ್ರಿಯೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
"ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿ ರುಜುವಾತು ಪಡಿಸುವ ಪುರಾವೆಯು ಕಡ್ಡಾಯ ಅಂಶವಲ್ಲ ಅಥವಾ ಬಲಿಪಶುವಿನ ಗುಪ್ತಾಂಗಗಳಲ್ಲಿ ಗಾಯಗಳಿಲ್ಲದಿದ್ದರೆ ಅದನ್ನು ಸಮ್ಮತಿ ಹೊಂದಿದ ಲೈಂಗಿಕ ಕ್ರಿಯೆ ಎಂದು ಪರಿಗಣಿಸುವಂತಿಲ್ಲ" ಎಂಬುದಾಗಿ ನ್ಯಾಯಾಮೂರ್ತಿಗಳಾದ ವಿ.ಎಸ್. ಸಿರ್ಪುಕಾರ್ ಮತ್ತು ಆರ್.ಎಂ. ಲೋಧಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ರಾಜೇಂದರ್ ಅಲಿಯಾಸ್ ರಾಜು ಎಂಬಾತ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಮಾಡುತ್ತಾ ಸುಪ್ರೀಂಕೋರ್ಟ್ ಈ ಮೇಲಿನ ತೀರ್ಪು ನೀಡಿದೆ. ಇಲ್ಲಿ ಆರೋಪಿಯು, ಬಲಿಪಶುವಿನ ಗುಪ್ತಾಂಗಗಳಲ್ಲಿ ಗಾಯಗಳಿಲ್ಲದ ಕಾರಣ ಅದು ಸಮ್ಮತ ಲೈಂಗಿಕ ಕ್ರಿಯೆ ಎಂದು ವಾದಿಸಿದ್ದ. ಅಲ್ಲದೆ ಅದು ಅತ್ಯಾಚಾರ ಎಂಬುದಕ್ಕೆ ಬಲಿಪಶುವಿನ ಹೇಳಿಕೆಯ ಹೊರತಾಗಿ ಇನ್ಯಾವುದೇ ಪುರಾವೆ ಇಲ್ಲ ಎಂದೂ ಆತ ವಾದಿಸಿದ್ದ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಲಿಪಶುವಿನ ರುಜುವಾತು ಮಾತ್ರವಿದ್ದರೂ ಅದು ನಂಬಲರ್ಹವಾಗಿದೆ. ಏಕೆಂದರೆ ಆತ್ಮಗೌರವವಿರುವ ಭಾರತೀಯ ಮಹಿಳೆಯು ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿಕೊಳ್ಳಲು ಸಾಕಷ್ಟು ನೋವು ಅನುಭವಿಸುತ್ತಾಳೆ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.
"ಭಾರತೀಯ ಸಮಾಜದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯು ಇತರರ ಮೇಲೆ ಆರೋಪ ಹೊರಿಸುವ ಬದಲು ಆ ನೋವನ್ನು ಮೌನವಾಗಿ ನುಂಗಿಕೊಳ್ಳುತ್ತಾಳೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೀಡುವ ಹೇಳಿಕೆಯು ಮಹಿಳೆಯೊಬ್ಬಳಿಗೆ ಅತ್ಯಂತ ಅವಮಾಕಾರಿ ವಿಚಾರ ಮತ್ತು ಲೈಂಗಿಕ ಅಪರಾಧದ ಬಲಿಪಶುವಾಗಿರುವಾಗ ನಿಜವಾದ ಅಪರಾಧಿಯನ್ನು ಹೊರತುಪಡಿಸಿ ಇತರರ ಮೇಲೆ ಗೂಬೆ ಕೂರಿಸಲಾರಳು ಎಂದು ಮಾರ್ಮಿಕವಾಗಿ ನ್ಯಾಯಾಲಯ ಹೇಳಿದೆ. |