'ರಾಜಕೀಯ ವಿಮರ್ಷಕರು' ಸಲಹೆ ನೀಡಿರುವಂತೆ ಬಿಜೆಪಿಯು ತನ್ನ ಗುಣನಡತೆಯನ್ನು ಬದಲಿಸಿಕೊಳ್ಳುವುದಿಲ್ಲ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಉತ್ತರಿಸುತ್ತಾ ಮಾತನಾಡುತ್ತಿದ್ದರು.
"ಬಿಜೆಪಿಯು ತನ್ನ ಸಿದ್ಧಾಂತವನ್ನು ಬದಲಿಸಿಕೊಂಡು ಸೌಮ್ಯವಾಗಬೇಕು ಎಂದು ಕೆಲವು ರಾಜಕೀಯ ವಿಮರ್ಷಕರು ಹೇಳಿದ್ದರಾರೆ. ಆದರೆ ಪ್ರಪಂಚವು ತನ್ನ ಗುಣನಡತೆಯನ್ನು ಬದಲಿಸಿದರೂ, ಬಿಜೆಪಿಯು ಬದಲಾಗದು ಎಂಬುದನ್ನು ಸ್ಪಷ್ಟಪಡಿಸುತ್ತೇನೆ" ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.
ಇತ್ತೀಚಿನ ಚುನಾವಣಾ ಫಲಿತಾಂಶವು ಬಿಜೆಪಿ ಕಾರ್ಯಕರ್ತರ ನೈತಿಕಸ್ಥೈರ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರಿದೆ ಎಂದು ಅವರು ಒಪ್ಪಿಕೊಂಡರು. ಅವರು ಇಲ್ಲಿನ ಷಣ್ಮುಕಾನಂದ ಸಭಾಭವನದಲ್ಲಿ ನಡೆದ ಬಿಜೆಪಿ ರಾಜ್ಯ ಘಟಕದ ಸಭೆಯಲ್ಲಿ ಮಾತನಾಡುತ್ತಿದ್ದರು.
"ರಾಷ್ಟ್ರಾದ್ಯಂತ ಪಕ್ಷದ ಕಾರ್ಯಕರ್ತರು ಮಹಾರಾಷ್ಟ್ರ ಚುನಾವಣೆಯತ್ತ ಆಶಾವಾದದಿಂದ ನೋಡುತ್ತಿದ್ದಾರೆ. ಮಹಾರಾಷ್ಟ್ರ ಶಾಸನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾದ ಗೆಲುವು ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದು ಅವರು ಅಭಿಪ್ರಾಯಿಸಿದರು.
ಹಿಂದುತ್ವ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ ಅವರು ಹಿಂದುತ್ವದ ಮೇಲೆ ವಿಶ್ವಾಸ ಇರುವವರು ಕೋಮುವಾದಿಗಳು ಹೇಗಾಗುತ್ತಾರೆ ಎಂದು ಅವರು ಪ್ರಶ್ನಿಸಿದರು. |