ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ 23 ಕಡತಗಳು ಕಾಣೆಯಾಗಿರುವ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರವು ಸಿಬಿಐ ತನಿಖೆಗೊಪ್ಪಿಸಿದೆ.
ಇದು ಗಂಭೀರ ಪ್ರಕರಣವಾಗಿರುವುದರಿಂದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ರಾಮಜನ್ಮಭೂಮಿ ವಿವಾದದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶದ ಮುಖ್ಯಕಾರ್ಯದರ್ಶಿ ಅತುಲ್‌ಕುಮಾರ್ ಗುಪ್ತಾ ಅವರನ್ನು ಕರೆಸಿ ವಿವಾದಿತ ಸ್ಥಳದ ಕಡತಗಳು ಎಲ್ಲಿಹೋದವು ಮತ್ತು ಹೇಗೆ ಕಾಣೆಯಾದವು ಎಂದು ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರಕರಣದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದೆ.
ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಪರ ವಕೀಲ ಜಫರ್ಯಾಬ್ ಗಿಲಾನಿ ಅವರು ಕಾಣೆಯಾಗಿರುವ ಕಡತಗಳು ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಹೊಂದಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
|