ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಕೀಲರನ್ನು ಕೊಲ್ಲಲು ಹಾಕಿದ್ದ ಸಂಚನ್ನು ಬಯಲು ಮಾಡಿರುವುದಾಗಿ ಹೇಳಿರುವ ಮುಂಬೈ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಕೀಲರಾದ ಗಣೇಶ್ ಸೋವಾನಿ ಮತ್ತು ನವೀನ್ ಛೋಟುಮಲ್‌ರನ್ನು ಕೊಲ್ಲಲು ಸಂಚುಹೂಡಿದ್ದ ಭೂಗತ ಪಾತಕಿ ಚೋಟಾಶಕೀಲನ ನಾಲ್ವರು ಸಹಚರರನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸಧಿಕಾರಿ ತಿಳಿಸಿದ್ದಾರೆ.
ಮೊಹಮ್ಮದ್ ಅಸ್ಮನ್ ಇಸ್ಮಾಯಿಲ್ ಗಚಿ ಅಲಿಯಾಸ್ ಡಾಕ್ಟರ್, ಕಮಿಲ್ ಅನ್ವರ್ ಇಫ್ಜಿ ಅಲಿಯಾಸ್ ಜಾನ್, ಶಾಹಿದ್ ಮೊಹಮ್ಮದಾಲಿ ಫಕೀರ್ ಅಲಿಯಾಸ್ ಬಾಬು ಮತ್ತು ಅರವಿಂದ್ ಕುಮಾರ್ ಪಾಠಕ್ ಅಲಿಯಾಸ್ ಪಂಡಿತ್ ಎಂಬವರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರೀಯ ಮುಂಬೈಯ ಉಪನಗರವಾದ ಸೇವ್ರಿ ಎಂಬಲ್ಲಿಂದ ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರಿಂದ ಎರಡು ಪಿಸ್ತೂಲ್‌ಗಳು, ಎರಡೂ ಚೂರಿಗಳು ಮತ್ತು ಎರಡು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜ್ಞಾ ಸಿಂಗ್ ಅವರನ್ನು ಮಾಲೆಗಾಂವ್ ಸ್ಫೋಟ ಆರೋಪಕ್ಕಾಗಿ ಬಂಧಿಸಲಾಗಿದ್ದು, ಅವರ ಮೇಲೆ ಕಠಿಣ ಕಾಯ್ದೆ ಮೋಕಾವನ್ನು ಹೇರಲಾಗಿದೆ. ಅವರು ಪ್ರಸ್ತುತ ಮ್ಯಾಜಿಸ್ಟೇರಿಯಲ್ ವಶದಲ್ಲಿದ್ದಾರೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುರವಾರ ಮೋಕಾ ನ್ಯಾಯಾಲಯ ನಿರಾಕರಿಸಿದೆ. |