ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಸಾವನ್ನಪ್ಪಿದ್ದು, 45 ವರ್ಷಗಳು ಸಮೀಪಿಸುತ್ತಿದ್ದರೂ ಅವರ ಸಾವಿನ ಸುತ್ತದ ಗುಮಾನಿಯ ಹುತ್ತ ಹಾಗೆಯೇ ಬೆಳೆದಿದೆ. ಈ ಕುರಿತು ಸಲ್ಲಿಸಲಾಗಿರುವ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರವು ತನ್ನ ಬಳಿ ಒಂದು ದಾಖಲೆ ಇದೆಯಾದರೂ ಅದನ್ನು ನೀಡಲು ನಿರಾಕರಿಸಿದೆ. ಈ ದಾಖಲೆಯನ್ನು ಬಹಿರಂಗ ಪಡಿಸಿದಲ್ಲಿ ಇದು ವಿದೇಶಾಂಗ ಸಂಬಂಧಗಳಿಗೆ ಹಾನಿಯುಂಟುಮಾಡುತ್ತದೆ, ರಾಷ್ಟ್ರದಲ್ಲಿ ಆಶಾಂತಿಗೆ ಕಾರಣವಾಗಬಹುದು ಮತ್ತು ಇದು ಸಾಂವಿಧಾನಿಕ ಅನುಬಂಧಗಳ ಉಲ್ಲಂಘನೆಯಾಗುತ್ತದೆ ಎಂಬ ಕಾರಣಗಳನ್ನು ನೀಡಿದೆ. ಶಾಸ್ತ್ರಿ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆಗ ಘೋಷಿಸಲಾಗಿತ್ತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು ತನ್ನ ಪತಿಗೆ ವಿಷವಿಕ್ಕಲಾಗಿದೆ ಎಂದು ಆರೋಪಿಸಿದ್ದರು. ಶಾಸ್ತ್ರಿ ಅವರು 1966ರ ಜನವರಿ 11ರಂದು ಸಾವನ್ನಪ್ಪಿದ್ದರು.
ಆಗಿನ ಯುಎಸ್ಎಸ್ಆರ್ ಮರಣೋತ್ತರ ಶಸ್ತ್ರಕ್ರಿಯೆ ನಡೆಸಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಶಾಸ್ತ್ರಿ ಅವರು ಖಾಸಗಿ ವೈದ್ಯ ಆರ್.ಎನ್. ಚಗ್ ಹಾಗೂ ಕೆಲವು ರಶ್ಯಾ ವೈದ್ಯರು ನಡೆಸಿದ ವೈದ್ಯಕೀಯ ತಪಾಸಣೆ ನಡೆಸಿರುವ ಒಂದು ವರದಿ ಇದೆ ಎಂದು ಸರ್ಕಾರ ಹೇಳಿದೆ.
'ಸಿಐಎ'ಸ್ ಐ ಆನ್ ಸೌಥ್ ಏಶ್ಯಾ'ದ ಲೇಖಕರಾಗಿರುವ ಅಂಜು ಧಾರ್ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದರು. "ಶಾಸ್ತ್ರಿ ಸಾವಿಗೆ ಸಂಬಂಧಿಸಿದಂತೆ ಒಂದು ದಾಖಲೆ ಇದೆ. ಯಾವುದೇ ದಾಖಲೆಗಳು ನಾಶವಾಗಿರುವ ಅಥವಾ ಕಳೆದುಹೋಗಿರುವ ದಾಖಲೆಗಳಿಲ್ಲ" ಎಂದು ಸರ್ಕಾರ ಹೇಳಿದೆ.
ಅಮೆರಿಕದ ಮಟ್ಟದಲ್ಲಿ ಮಾಹಿತಿ ಬಹಿರಂಗ ನೀತಿಗಾಗಿ ಲಾಬಿನಡೆಸಲು ಧಾರ್ ಅವರು ಎಂಡ್‌ದಿಸೀಕ್ರೆಸಿ.ಕಾಮ್ ಎಂಬ ವೆಬ್‌ಸೈಟ್ ಆರಂಭಿಸಿದ್ದಾರೆ. ಇವರು ಭಾರತಕ್ಕೆ ಸೋವಿಯತ್ ಯಾವುದಾದರೂ ಮಾಹಿತಿ ನೀಡಿದೆಯೇ ಎಂದು ಕೇಳಿದ್ದಾರೆ. ಭಾರತವು ಪೋಸ್ಟ್‌ಮಾರ್ಟಂ ನಡೆಸಿದೆಯೇ ಮತ್ತು ವಂಚನೆ ಆಪಾದನೆಗಳ ಕುರಿತು ಸರ್ಕಾರ ಯಾವುದಾದರೂ ತನಿಖೆ ನಡೆಸಿದೆಯೇ ಎಂಬ ಕುರಿತು ಅವರು ಸರ್ಕಾರವನ್ನು ಕೇಳಿದ್ದು, ಗೃಹಸಚಿವಾಲಯ ಇನ್ನಷ್ಟೆ ಉತ್ತರಿಸಬೇಕಿದೆ.
ರಶ್ಯಾದಲ್ಲಿ ಭಾರತ-ಪಾಕಿಸ್ತಾನ ಶೃಂಗಸಭೆಗೆ ತೆರಳಿದ್ದ ಶಾಸ್ತ್ರಿ ಅವರು ಪಾಕಿಸ್ತಾನದೊಂದಿಗೆ ತಾಶ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಅಸ್ವಸ್ಥರಾಗಿದ್ದರು. ತೀವ್ರವಾದ ಕೆಮ್ಮುಕಾಣಿಸಿಕೊಂಡಿದ್ದು ಅವರು ಪಕ್ಕದಲ್ಲಿದ್ದ ಪ್ಲಾಸ್ಕ್‌ನತ್ತೆ ಬೆಟ್ಟು ಮಾಡಿದ್ದರು. ಸಿಬ್ಬಂದಿಯೊಬ್ಬ ನೀಡಿದ್ದ ನೀರನ್ನು ಅವರು ಕುಡಿದಿದ್ದು, ಕೆಲವು ಕ್ಷಣಗಳ ಬಳಿಕ ಪ್ರಜ್ಞಾಹೀನರಾಗಿದ್ದರು. ಅವರನ್ನು ಪ್ರಜ್ಞೆಗೆ ಮರಳಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಶಾಸ್ತ್ರಿಯವರಿಗೆ ಆತಿಥ್ಯನೀಡಿದ್ದ ರಶ್ಯ ಅಡುಗೆಯಾತನನ್ನು ವಿಷವಿಕ್ಕಿರುವ ಸಂಶಯದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನ್ನು ನಿರಪರಾಧಿ ಎಂದು ಬಿಟ್ಟುಬಿಡಲಾಗಿತ್ತು.
ಸಂಶಯ ನಿವಾರಿಸಿ ಆಟಿಐಯಡಿ ಮಾಹಿತಿ ನೀಡಲು ಸರ್ಕಾರವು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಶಾಸ್ತ್ರಿಯವರ ಕುಟುಂಬವು ಅವರ ಸಾವಿನ ಕುರಿತ ಎಲ್ಲ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರ ಪುತ್ರ ಸುನಿಲ್ ಅವರು "ಅವರ ಸಾವು ನಮಗೆ ಮತ್ತು ಇಡಿಯ ರಾಷ್ಟ್ರಕ್ಕೆ ಬಹುದೊಡ್ಡ ಆಘಾತವಾಗಿತ್ತು. ನನಗಾಗ ಬರಿಯ 16 ವರ್ಷಗಳ ಪ್ರಾಯ. ಅವರ ದೇಹದ ಎದೆ, ಕಿಬ್ಬೊಟ್ಟೆ ಮತ್ತು ಬೆನ್ನಿಲ್ಲಿ ನೀಲಿಛಾಯೆ ಮಡುಗಟ್ಟಿತ್ತು ಎಂಬುದು ನನಗೆ ನೆನಪಿದೆ" ಎಂದು ಹೇಳಿದ್ದಾರೆ. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. |