ಹಿರಿಯ ಅಧಿಕಾರಿಗಳು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಮಹಿಳಾ ಸೇನಾಧಿಕಾರಿಯೊಬ್ಬರನ್ನು ತನಿಖೆ ವರದಿಯು ಅವರ ಆಪಾದನೆ ಸುಳ್ಳೆಂದು ಹೇಳಿರುವ ಹಿನ್ನೆಲೆಯಲ್ಲಿ ವಜಾಮಾಡಲಾಗಿದೆ.
ಪೂನಂ ಕೌರ್ ಎಂಬ ಅಧಿಕಾರಿಯು, ಸುಳ್ಳು ಆರೋಪಮಾಡಿದ್ದಾರೆ ಎಂದು ತನಿಖೆಯ ಬಳಿಕ ತಿಳಿದು ಬಂದಿದ್ದು ಅವರನ್ನು ಅವಿಧೇಯತೆ, ಹಿರಿಯ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಹಾಗೂ ಮಾಧ್ಯಮಗಳಿಗೆ ವಿಷಯ ಸೋರಿಕೆ ಮಾಡುವ ಆಪಾದನೆಯೊಂದಿಗೆ ಕೆಲಸದಿಂದ ತೆಗೆದುಹಾಕಲಾಗಿದೆ.
ಕೌರ್ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಯಾಣದ ಕಲ್ಕಾ ನಗರದ ಆರ್ಮಿ ಸಪ್ಪೈ ಕಾರ್ಪ್ಸ್(ಎಎಸ್‌ಸಿ)ಯ ಮೂವರು ಹಿರಿಯ ಅಧಿಕಾರಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದು, ಅವರ ಕೃತ್ಯವನ್ನು ಪ್ರತಿಭಟಿಸಿದಾಗ ತನ್ನನ್ನು ಅಕ್ರಮವಾಗಿ ಕೂಡಿಹಾಕಿದರು ಎಂದು 2008ರ ಜುಲೈ ತಿಂಗಳಲ್ಲಿ ಆರೋಪಿಸಿದ್ದರು.
ಸೇನೆಯು ಆಕೆಯ ಆಪಾದನೆಗಳನ್ನೆಲ್ಲ ತಳ್ಳಿಹಾಕಿದ್ದು, ಆಕೆ 'ಮಾನಸಿಕ ದೌರ್ಬಲ್ಯ' ಹೊಂದಿದ್ದಾಳೆ ಎಂದು ತಿರುಗಿ ಆಕೆಯ ವಿರುದ್ಧ ಆಪಾದನೆ ಮಾಡಿತ್ತು.
ಸೇನೆಯು ಬಲಿಪಶುವನ್ನೇ ಆರೋಪಿಯನ್ನಾಗಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಬಲಿಪಶುವನ್ನೇ ಆರೋಪಿಯಾಗಿಸುತ್ತಿರುವುದು ಭಾರತೀಯ ಸೇನೆಯಲ್ಲಿ ಇದು ಪ್ರಥಮ ಪ್ರಕರಣವಾಗಿದೆ. ಆಕೆಯನ್ನು ವ್ಯವಸ್ಥಿತವಾಗಿ ಬಲಿಪಶುವನ್ನಾಗಿಸಲಾಗಿದೆ" ಎಂಬುದಾಗಿ ಅವರ ವಕೀಲರಾದ ಎಸ್.ಕೆ. ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
"ತನ್ನ ಕಕ್ಷಿದಾರರಿಗೆ ವಿಧಿಸಿರುವ ಶಿಕ್ಷೆಯು ಬಹಳ ಕಠಿಣವಾಗಿದೆ. ಕೌರ್ ಮಾಡಿರುವ ಆಪಾದನೆಗಳ ಕುರಿತು ತನಿಖೆ ನಡೆಸದೆ ಅದನ್ನು ಚಾಪೆ ಕೆಳಗೆ ಹಾಕಿದೆ. ಕ್ಯಾಪ್ಟರ್ ಕೌರ್ ವಿರುದ್ಧದ 21 ಆರೋಪಗಳಿದ್ದು, ಇವುಗಳಲ್ಲಿ 11ನ್ನು ಕೈಬಿಡಲಾಗಿದೆ" ಎಂದು ಅಗರ್ವಾಲ್ ಹೇಳಿದ್ದಾರೆ. |