ನಿರ್ಮಾಣಹಂತದಲ್ಲಿದ್ದ ದೆಹಲಿ ಮೆಟ್ರೋ ಮೇಲ್ಸೇತುವೆ ಕುಸಿದಿರುವ ದುರಂತವು ದಕ್ಷಿಣ ದೆಹಲಿಯಲ್ಲಿ ಸಂಭವಿಸಿದ್ದು, ದುರಂತದಲ್ಲಿ ಐದು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳ ಹಿಂದೆಯೂ ಇಂತಹುದೇ ದುರಂತ ಸಂಭವಿಸಿತ್ತು.
ಲಜ್‌ಪತ್ ನಗರದ ಧಮ್ರುತ್‌ಪುರದಲ್ಲಿನ ಲೇಡಿ ಶ್ರೀರಾಮ್ ಕಾಲೇಜು ಸಮೀಪ ನಸುಕಿನ ಐದು ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ.
ಕಾರ್ಯನಿರತರಾಗಿದ್ದ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮಂದಿ ಸತ್ತಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಮೆಟ್ರೋ ವಕ್ತಾರ ಅಂಜು ದಯಾಲ್ ಅವರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತಕ್ಕೆ ಕಾರಣವೇನೆಂದು ತನಿಖೆ ನಡೆಸುತ್ತಿರುವುದಾಗಿ ದಯಾಳ್ ತಿಳಿಸಿದ್ದಾರೆ. ಸೇತುವೆಯ ವಿನ್ಯಾಸದಲ್ಲಿ ಸಮಸ್ಯೆ ಇರಬೇಕೆಂದು ತೋರುತ್ತದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ನುಡಿದರು.
ಇಬ್ಬರು ಕಾರ್ಮಿಕರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು ಅವರು ಸತ್ತಿರುವುದು ದೃಢಪಟ್ಟಿದೆ. ದುರಂತದಲ್ಲಿ ಸತ್ತವರು ಮತ್ತು ಗಾಯಗೊಂಡ ಎಲ್ಲರೂ ಗಮ್ಮನ್ ಇಂಡಿಯಾ ಗುತ್ತಿಗೆ ಸಂಸ್ಥೆಯ ಕಾರ್ಮಿಕರು ಎಂದು ಅವರು ತಿಳಿಸಿದ್ದಾರೆ
ನಿರ್ಮಾಣ ಹಂತದಲ್ಲಿದ್ದ ಸೇತುವೆಯು ನೀರಿನ ಪೈಪ್‌ಲೈನ್ ಮೇಲೆ ಬಿದ್ದು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಸ್ಥಳದಲ್ಲಿ ಸುಮಾರು 20ರಿಂದ 25ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಕಳೆದ ಅಕ್ಟೋಬರ್‌ನಲ್ಲಿಯೂ ಇಂತಹುದೇ ದುರಂತ ಸಂಭವಿಸಿದ್ದು, ಇಬ್ಬರು ಸತ್ತು 16 ಮಂದಿ ಗಾಯಗೊಂಡಿದ್ದರು.
ದುರಂತದ ಬಗ್ಗೆ ತನಿಖೆ ಮೇಲ್ಸೇತುವೆ ಕುಸಿತ ದುರಂತದ ಕುರಿತು ತನಿಖೆ ನಡೆಸುವುದಾಗಿ ಹೇಳಿರುವ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್, ದುರಂತದಲ್ಲಿ ಮಡಿದವರಿಗಾಗಿ ಕಂಬನಿ ಮಿಡಿದಿದ್ದಾರೆ. ಅವರು ಬಲಿಪಶುಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. |