ಆಂಧ್ರಪ್ರದೇಶದ ಟಿಡಿಪಿ ಶಾಸಕ ಕೋವೂರು ಟಿ.ವಿ. ರಾಮರಾಮ್ ಅವರ ವಿರುದ್ಧ ಹೊರಿಸಲಾಗಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆಪಾದನೆ ಮೇಲ್ನೋಟಕ್ಕೆ ನಿಜವೆಂದು ತೋರುತ್ತದೆ ಎಂಬುದಾಗಿ ಪಶ್ಚಿಮ ಗೋದಾವರಿ ಜಿಲ್ಲಾ ಪೊಲೀಸರು ಆಂಧ್ರಪ್ರದೇಶ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ತಿಳಿಸಿದ್ದಾರೆ.
ಶಾಸಕರು ನಿದಾಡವೊಲು ಎಂಬಲ್ಲಿ ನಡೆಸುತ್ತಿರುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಐವರು ಕೇರಳ ವಿದ್ಯಾರ್ಥಿನಿಯರು ಕಳೆದವಾರ ದೂರು ನೀಡಿದ್ದು, ಈ ಸಂಬಂಧ ಉತ್ತರಿಸುವಂತೆ ಆಯೋಗದ ಅಧ್ಯಕ್ಷ ಬಿ ಶುಭಾಶನ್ ರೆಡ್ಡಿ ಪೊಲೀಸರಿಗೆ ತಿಳಿಸಿದ್ದರು.
ಪಶ್ಚಿಮ ಗೋದಾವರಿ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಲೈಂಗಿಕ ಕಿರುಕುಳ ಪ್ರಕರಣವನ್ನು ಇದೀಗ ಸಿಐಡಿಗೆ ಒಪ್ಪಿಸಲಾಗಿದೆ.
ನರಸಾಪುರ ಡಿಎಸ್‌ಪಿ ಪಿ. ವೆಂಕಟ್ರಾಮ ರೆಡ್ಡಿ ಅವರು ವರದಿಯನ್ನು ಶನಿವಾರ ಸಲ್ಲಿಸಿದ್ದು, ಶಾಸಕರು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಲು ಪ್ರಯತ್ನಿಸಿದ್ದು ಹೌದು ಎಂದು ವರದಿಯಲ್ಲಿ ಹೇಳಲಾಗಿದೆ. ಸಿಐಡಿಯು ತನ್ನ ತನಿಖಾ ವರದಿಯನ್ನು ಆಗಸ್ಟ್ 3ರೊಳಗೆ ಸಲ್ಲಿಸುವಂತೆ ಸುಭಾಶನ್ ರೆಡ್ಡಿ ಹೇಳಿದ್ದಾರೆ. |