ದಲಿತ ಹುಡುಗನನ್ನು ಪ್ರೀತಿಸಿ ವರಿಸಿದ 'ತಪ್ಪಿಗೆ' 22ರ ಹರೆಯದ ಹೆತ್ತ ಮಗಳನ್ನೇ ತಂದೆಯೊಬ್ಬ ವಿಷವಿಕ್ಕಿ, ಅದರಲ್ಲಿ ಸಾಯದನ್ನು ಕಂಡು ಕತ್ತು ಹಿಸುಕಿ ಕೊಂದು ಹಾಕಿದ ದಾರುಣ ಘಟನೆ ಜಮ್ಮುವಿನ ಅಕ್ನೂರ್ ಎಂಬಲ್ಲಿ ಸಂಭವಿಸಿದೆ.
ಸೀಮಾ ಶರ್ಮಾ ಎಂಬ ಬ್ರಾಹ್ಮಣ ಹುಡುಗಿ ಕಳೆದ ಎಪ್ರಿಲ್ ತಿಂಗಳಲ್ಲಿ ಆರ್ಯಸಮಾಜದಲ್ಲಿ ತಾರ್ಸೆಮ್ ಲಾಲ್ ಎಂಬ ದಲಿತ ಹುಡುಗನನ್ನು ರಹಸ್ಯವಾಗಿ ವಿವಾಹವಾಗಿದ್ದರು. ಈ ವಿವಾಹವನ್ನು ಗುಟ್ಟಾಗಿಯೇ ಇರಿಸಿದ್ದರೂ, ಈ ತಿಂಗಳ ಆದಿಯಲ್ಲಿ ಆಕೆಯ ವಿವಾಹವನ್ನು ಹೆತ್ತವರು ಬೇರೊಬ್ಬನೊಂದಿಗೆ ನಿಶ್ಚಯಿಸಿದಾಗ, ಸೀಮಾ ತಾನು ರಹಸ್ಯವಾಗಿ ವಿವಾಹವಾಗಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಳು.
ಸೀಮಾಳದ ತಂದೆ ತಾನು ನಿಶ್ಚಯಿಸಿದ ಹುಡುಗನಿಗೆ ಆಕೆಯ ತಂಗಿಯನ್ನು ಮದುವೆ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿದರಾದರೂ, ಅದೇ ರಾತ್ರಿ ಸೀಮಾಳನ್ನು ಕೊಂದು ಹಾಕಿದ್ದಾನೆ.
"ತಂದೆಯು ಆಕೆಯ ಪುತ್ರಿಗೆ ವಿಷ ಉಣಿಸಿದ್ದ, ಆಕೆ ಸಾಯದಿರುವುದನ್ನು ಕಂಡು ಆಕೆಯನ್ನು ಉಸಿರುಗಟ್ಟಿಸಿ ಕೊಂದಿರುವುದಾಗಿ ಹೇಳಿದ" ಎಂಬುದಾಗಿ ಜಮ್ಮು ಎಸ್ಎಸ್‌ಪಿ ಮನೋಹಲ್ ಸಿಂಗ್ ತಿಳಿಸಿದ್ದಾರೆ.
ತನ್ನ ಪುತ್ರಿ ದಲಿನೊಂದಿಗೆ ಜೀವನ ಸಾಗಿಸಿ ತನ್ನ ಕುಟುಂಬದ 'ಮರ್ಯಾದೆ' ಕಳೆಯುವುದು ಬೇಡ ಎಂಬ ಹಿನ್ನೆಲೆಯಲ್ಲಿ ತಂದೆ ಮಗಳ ಕೊಲೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಸಿಟ್ಟು ಮತ್ತು ಮರ್ಯಾದೆಯ ಕಾರಣಕ್ಕಾಗಿ ತಂದೆ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೀಮಾಳ ಸಾವಿನ ಸುದ್ದಿ ತಿಳಿಯುತ್ತಲೇ ಆತ್ಮಹತ್ಯೆಗೆ ಪ್ರಯತ್ನಿಸಿರುವ ಆಕೆಯ ದಲಿತ ಪತಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. |