ಆರು ಮಂದಿಯನ್ನ ಬಲಿತೆಗೆದುಕೊಂಡಿರುವ ಮೇಲ್ಸೇತುವೆ ಕುಸಿತದ ಹಿನ್ನೆಲೆಯಲ್ಲಿ 'ದೆಹಲಿ ಮೆಟ್ರೊರೈಲ್ ಕಾರ್ಪೋರೇಶನ್'(ಡಿಎಂಆರ್‌ಸಿ) ಮುಖ್ಯಸ್ಥ ಇ. ಶ್ರೀಧರನ್ ಅವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಈ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ." ನಿಮ್ಮಕೊಡುಗೆಯನ್ನು ಗೌರವಿಸುವ ನಾವು ನಿಮ್ಮ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸುತ್ತೇವೆ" ಎಂಬುದಾಗಿ ದೆಹಲಿ ಸರ್ಕಾರದ ನಿರ್ಧಾರವನ್ನು ತಿಳಿಸಲು ಶ್ರೀಧರನ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.ದೆಹಲಿ ಮೆಟ್ರೊ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ದುರಂತವಾಗಿದ್ದು ಆರು ಮಂದಿ ಸತ್ತಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಒಬ್ಬ ಸೈಟ್ ಇಂಜೀನಿಯರ್ ಸೇರಿದ್ದಾರೆ.ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯು ಕಾಮಗಾರಿ ನಡೆಯುತ್ತಿರುವಂತೆಯೇ ಭಾನುವಾರ ನಸುಕಿನಲ್ಲಿ ಕುಸಿದಿತ್ತು. ಸಿಮೆಂಟ್ ತೊಲೆಯನ್ನು ಏರಿಸುತ್ತಿರುವಾಗ ಕಂಬವೊಂದು ಹಠಾತ್ತಾಗಿ ಕುಸಿದು ಈ ಅವಗಢ ಸಂಭವಿಸಿದೆ. ಕಂಬದ ವಿನ್ಯಾಸದಲ್ಲಿನ ದೋಷ ಅಪಘಾತಕ್ಕೆ ಕಾರಣ ಎಂದು ದೆಹಲಿ ಮೆಟ್ರೊ ಅಭಿಪ್ರಾಯಿಸಿದೆ. ಈ ದುರ್ಘಟನೆಗೆ ಶ್ರೀಧರನ್ ಅವರು ನೇರವಾಗಿ ಜವಾಬ್ದಾರರಲ್ಲದಿದ್ದರೂ ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.ತನ್ನ ಸೇವಾವಧಿಯಲ್ಲಿ ಉತ್ತಮ ಹೆಸರುಗಳಿಸಿರುವ ಶ್ರೀಧರನ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮುಂಬರುವ ವರ್ಷದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ದೆಹಲಿ ಮೆಟ್ರೋಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರೀಧರನ್ ಅವರ ಸೇವೆಯು ಅಗತ್ಯವಿರುವ ಕಾರಣ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.ಮೇಲ್ಸೇತುವೆ ಕುಸಿತ ದುರಂತದ ತನಿಖೆಗಾಗಿ ದೆಹಲಿ ಮೆಟ್ರೋವು ನಾಲ್ವರು ಸದಸ್ಯರ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ನೇಮಿಸಿದೆ. |