ನಿರ್ಮಾಣ ಹಂತದಲ್ಲಿದ್ದ ದೆಹಲಿ ಮೆಟ್ರೋ ಮೇಲ್ಸೇತುವೆ ಕುಸಿದು ಆರು ಮಂದಿಯನ್ನು ಬಲಿತೆಗೆದುಕೊಂಡಿರುವ ಬೆನ್ನಿಗೆ ಅದೇ ಸ್ಥಳದಲ್ಲಿ ಸೋಮವಾರ ಇನ್ನೊಂದು ದುರಂತ ಸಂಭವಿಸಿದ್ದು, ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ಮೂರು ಕ್ರೇನುಗಳು ಉರುಳಿಬಿದ್ದಿವೆ. ಇದರಿಂದಾಗಿ ಪರಿಹಾರ ಕಾರ್ಯಕ್ಕೆ ಮತ್ತಷ್ಟು ಅಡಚಣೆ ಉಂಟಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಅವಘಡದ ಸ್ಥಳದಲ್ಲಿ ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿದ್ದ ವೇಳೆ ಸೋಮವಾರ ಮುಂಜಾನೆಯ ವೇಳೆಗೆ ಕನಿಷ್ಠ ಮೂರು ಕ್ರೇನುಗಳು ತಲೆಕೆಳಗಾಗಿ ಉರುಳಿವೆ.
ಭಾನವಾರದ ದುರಂತದಿಂದಾಗಿ ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಿರುವ ಅವಶೇಷಗಳನ್ನು ತೆರವು ಗೊಳಿಸಲು ಯತ್ನಿಸುತ್ತಿದ್ದ ವೇಳೆ ಕ್ರೇನುಗಳು ಸಮೀಪದ ಕಟ್ಟಡಗಳ ಮೇಲೆ ಕುಸಿದು ಬಿದ್ದವು ಎಂಬುದಾಗಿ ಆರಂಭಿಕ ವರದಿಗಳು ತಿಳಿಸಿವೆ.
ಅವಶೇಷಗಳಡಿಯಲ್ಲಿ ಯಾರೂ ಸಿಲುಕಿಲ್ಲ ಎಂದು ವರದಿಗಳು ಹೇಳಿವೆ. ಸೋಮವಾರ ಸಾಯಂಕಾಲದ ವೇಳೆಗೆ ಅವಶೇಷಗಳನ್ನು ಎತ್ತಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಮತ್ತೊಂದು ಅವಘಡ ಸಂಭವಿಸಿದ್ದು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ.
ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರು ಈ ಕುರಿತು ತನಿಖೆ ನಡೆಸಲು ತನಿಖಾ ಸಮಿತಿಯನ್ನು ನೇಮಿಸುವುದಾಗಿ ಹೇಳಿದ್ದಾರೆ. |