ಮಧ್ಯಪ್ರದೇಶದಲ್ಲೊಂದು ಸಾಮೂಹಿಕ ವಿವಾಹ. ಇನ್ನೇನು ಸಮಾರಂಭಗಳು ಆರಂಭವಾಗಬೇಕು, ಅಷ್ಟೊತ್ತಿಗೆ ಭಾವೀ ವಧುವೊಬ್ಬಳಿಗೆ ಹೆರಿಗೆ ನೋವು ಆರಂಭವಾಗಿ ಬೊಬ್ಬಿಡತೊಡಗಿದಳು. ನೆರೆದವರಿಗೆ ಆಘಾತ. ತಕ್ಷಣವೇ ನೆರೆದಿದ್ದ ಎಲ್ಲ 152 ಮಂದಿ ವಧುಗಳಿಗೆ ಕನ್ಯತ್ವ ಪರೀಕ್ಷೆ, ಗರ್ಭಧಾರಣೆ ಪರೀಕ್ಷೆಗಳನ್ನೂ ಮಾಡಿಸಲಾಯಿತು. ಅವರಲ್ಲಿ 14 ಮಂದಿ ಗರ್ಭಿಣಿಯರೆಂಬುದು ತಿಳಿದುಬಂತು!ಭೋಪಾಲದಿಂದ ಸುಮಾರು 350 ಕಿ.ಮೀ. ದೂರದ ಶಾದೂಲ್ ಎಂಬಲ್ಲಿ ಜೂನ್ 30ರಂದು ಸಾಮೂಹಿಕ ವಿವಾಹದ ಸಂದರ್ಭದಲ್ಲಿ ನಡೆದ ಈ ಘಟನೆಯು ಕಾರ್ಯಕರ್ತರಲ್ಲಿ, ಬುಡಕಟ್ಟು ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಡೆದದ್ದು ಕೂಡ 'ಮುಖ್ಯಮಂತ್ರಿ ಕನ್ಯಾದಾನ' ಎಂಬ ಸರಕಾರಿ ಯೋಜನೆಯಡಿಯಲ್ಲಿ. ಬಡ ಕುಟುಂಬದ ಹುಡುಗಿಯರಿಗೆ ಸರಕಾರಿ ವೆಚ್ಚದಲ್ಲಿ ವಿವಾಹ ಮಾಡಿಸುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಯೋಜನೆಯಿದು.ಈ ಯೋಜನೆಯಡಿಯಲ್ಲಿ, ಉಚಿತವಾಗಿ ವಿವಾಹ ನೆರವೇರಿಸಲಾಗುತ್ತದೆ. ಎಲ್ಲ ವ್ಯವಸ್ಥೆಗಳನ್ನು ಜಿಲ್ಲಾಡಳಿತವೇ ಮಾಡುತ್ತದೆ. ಪ್ರತಿಯೊಂದು ಜೋಡಿಗೆ ಸುಮಾರು 5000 ರೂ. ಮೊತ್ತದ ಮನೆಗೆ ಅಗತ್ಯ ಬೇಕಿರುವ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ.ಆ ದಿನ ನಡೆದ ಘಟನೆಯಲ್ಲಿ, ತಾಳಿ ಕಟ್ಟುವ ಕೆಲವೇ ಕ್ಷಣಗಳಲ್ಲಿ ಈ ತರುಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಘಟಕರು ತಕ್ಷಣವೇ ವಿವಾಹ ಸಮಾರಂಭವನ್ನು ನಿಲ್ಲಿಸಿ, ಮದುವೆಗೆ ಬಂದಿದ್ದ ಎಲ್ಲ 152 ವಧುಗಳಿಗೆ ಗರ್ಭ ಪರೀಕ್ಷೆ ಮಾಡಲಾಯಿತು. ಅವುಗಳಲ್ಲಿ 14 ಮಂದಿ 'ಗರ್ಭಿಣಿ' ವಧುಗಳು ಸಿಕ್ಕಿಬಿದ್ದರೆ, ಒಬ್ಬಾಕೆ ಅಪ್ರಾಪ್ತೆ ಎಂಬುದು ತಿಳಿದುಬಂತು. ಆ ನಂತರ, ಯೋಜನೆಯಡಿ ಉಳಿದ 138 ಮಂದಿಗೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸುಂದರ್ ಸಿಂಗ್, ಜಿಲ್ಲಾಧಿಕಾರಿ ಮತ್ತಿತರ ಸರಕಾರಿ ಅಧಿಕಾರಿಗಳೂ ಹಾಜರಿದ್ದರು.ಸರಕಾರಿ ಯೋಜನೆಯ ದುರುಪಯೋಗವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಕೆಲವು ದಲ್ಲಾಳಿಗಳು ಇತ್ತೀಚೆಗೆ ಮದುವೆಯಾದ ದಂಪತಿಯನ್ನೂ ಇಲ್ಲಿಗೆ ಕರೆದುತಂದು ಮತ್ತೊಂದು ಮದುವೆ ಮಾಡಿಸಿ, ಅವರಿಂದ ಕಮಿಶನ್ ಪಡೆಯುತ್ತಾರೆ ಎಂಬುದು ಸ್ಥಳೀಯರ ಆರೋಪ.ಈ ನಕಲಿ ವಿವಾಹಗಳ ಆರೋಪ ಕೇಳಿಬಂದಿದ್ದರಿಂದ ಸ್ಥಳೀಯಾಡಳಿತವು ಕನ್ಯತ್ವ ಮತ್ತು ಗರ್ಭ ಪರೀಕ್ಷೆಗೆ ಆದೇಶಿಸಿತ್ತು. ಆದರೆ, ಈಗಾಗಲೇ ಮದುವೆಯಾದವರಿಗೂ ಈ ಪರೀಕ್ಷೆ ಮಾಡಿಸುವುದು ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.ಮದುವೆಗೆ ಅರ್ಹತೆಯ ಮಾನದಂಡ ರೂಪಿಸಲು ಸಾಕಷ್ಟು ಇತರ ವಿಧಾನಗಳಿವೆ. ಇಂಥ ಪರೀಕ್ಷೆಗಳು ಸ್ತ್ರೀತ್ವಕ್ಕೇ ಅವಮಾನ. ಮಹಿಳೆಯರ ಖಾಸಗಿತನ ಮತ್ತು ಮಾನವ ಹಕ್ಕುಗಳನ್ನು ಇದು ಉಲ್ಲಂಘಿಸಿದಂತಾಗುತ್ತದೆ ಎಂಬುದು ಆರಾಹ ಹಕ್ಕುಗಳ ಆಂದೋಲನದ ಕಾರ್ಯಕರ್ತರೊಬ್ಬರ ಆರೋಪ. ಅವರು ಈ ರೀತಿ ಹೇಳುವುದಕ್ಕೆ ಇನ್ನೊಂದು ಪ್ರಧಾನ ಕಾರಣವಿದೆ. ಅಲ್ಲಿನ ಹಲವಾರು ಬುಡಕಟ್ಟು ಜನಾಂಗಗಳಲ್ಲಿ, ವಿವಾಹಕ್ಕೆ ಮೊದಲೇ ಹುಡುಗ-ಹುಡುಗಿ ಒಟ್ಟಿಗೇ ವಾಸಿಸುವ ಪದ್ಧತಿಗಳಿವೆಯಂತೆ. ಮದುವೆಯಾಗಲು ನಿರ್ಧರಿಸುವ ಮುನ್ನ ಅವರು ಪರಸ್ಪರ ಅರಿತುಕೊಂಡು ಮುಂದೆ ಹೆಜ್ಜೆ ಇಡುವ ಸಂಪ್ರದಾಯವಿದು.ರಾಜ್ಯ ಸರಕಾರವು ಈ ಕನ್ಯಾದಾನ ಯೋಜನೆಗೆ ಬಜೆಟಿನಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 2009ರ ಜನವರಿ ತಿಂಗಳಿಂದ ವಧುವಿಗೆ ಕೊಡುವ ಉಡುಗೊರೆಯ ಮೊತ್ತವನ್ನು 5000ದಿಂದ 6000 ರೂ.ಗೆ ಏರಿಸಿದೆ. ರಾಜ್ಯದ ಆರ್ಥಿಕ ಸಮೀಕ್ಷೆಯ ಪ್ರಕಾರ, ಏಪ್ರಿಲ್ 2006ದಿಂ ಮಾರ್ಚ್ 2009ರವರೆಗಿನ ಅವಧಿಯಲ್ಲಿ ಈ ಯೋಜನೆಯಡಿ ಒಟ್ಟು 88,460 ವಿವಾಹಗಳು ನೆರವೇರಿವೆ. ಈಗ ವಿವಾದ ಸೃಷ್ಟಿಯಾಗಿದೆ! |