ಮೂರು ವರ್ಷಗಳ ಹಿಂದೆ ಹಾಡುಹಗಲೇ ಕಾಲೇಜು ಕ್ಯಾಂಪಸ್ಸಿನಲ್ಲಿ ಎಬಿವಿಪಿ ಕಾರ್ಯಕರ್ತರ ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಪ್ರೊ| ಸಭರ್ವಾಲ್ ಕೊಲೆ ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಇಲ್ಲಿನ ನ್ಯಾಯಾಲಯ ಸೋಮವಾರ ದೋಷಮುಕ್ತಿಗೊಳಿಸಿದೆ.
ಉಜೈನಿಯಲ್ಲಿ 2006ರಲ್ಲಿ ಸಭರ್ವಾಲ್ ಅವರು ಬಿಜೆಪಿಯ ವಿದ್ಯಾರ್ಥಿ ದಳವಾದ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪ್ರಾಸಿಕ್ಯೂಶನ್ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಕಾರಣ ಆಪಾದಿತರನ್ನು ದೋಷಮುಕ್ತರಾಗಿಸುವುದಾಗಿ ನಾಗ್ಪುರ ಸೆಷನ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಘಟನೆಯ ಸ್ಥಳದಲ್ಲಿ ಈ ಆರೋಪಿಗಳು ಇದ್ದರೆಂಬುದನ್ನು ಸಾಬೀತುಪಡಿಸಲೂ ಪ್ರಾಸೆಕ್ಯೂಶನ್ ವಿಫಲವಾಗಿದೆ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ.
ಉಜ್ಜೈನಿಯ ಮಾಧವ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಸಭರ್ವಾಲ್ ಅವರು 2006ರ ಆಗಸ್ಟ್ 26ರಂದು ಹತ್ಯೆಯಾಗಿದ್ದರು. ಕಾಲೇಜು ಪದಾಧಿಕಾರಿಗಳ ಸಂಘಟನೆಯ ಚುನಾವಣೆಯನ್ನು ಮುಂದೂಡಿರುವುದಕ್ಕೆ ವ್ಯಗ್ರರಾಗಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಚುನಾವಣಾ ಮುಂದೂಡಿಕೆಯ ಕಾರಣಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಅವರು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಉಜ್ಜೈನಿಯಿಂದ ನಾಗ್ಪುರಕ್ಕೆ ವರ್ಗಾಯಿಸಿತ್ತು. ಮದ್ಯಪ್ರದೇಶ ಸರ್ಕಾರವು ಪ್ರಕರಣದ ಮೇಲೆ ಪ್ರಭಾವ ಬೀರಬಹುದೆಂದು ಮೃತ ಪ್ರೊಫೆಸರ್ ಪುತ್ರ ಹಿಮಾಂಶು ಸಭರ್ವಾಲ್ ಪ್ರಕರಣವನ್ನು ಬೇರೆಡೆ ವರ್ಗಾಯಿಸುವಂತೆ ವಿನಂತಿಸಿದ್ದರು.
ಆರೋಪಿಗಳಾಗಿದ್ದ ವಿಮಲ್ ಥೋಮಾರ್, ಪಂಕಜ್ ಮಿಶ್ರಾ, ವಿಮಲ್ ರಾಜೋರಿಯ, ಶಶಿ ರಂಜನ್ ಅಕೆಲಾ, ಹೇಮಂತ್ ದುಬೆ ಮತ್ತು ಸುಧೀರ್ ಅವರುಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. |