ಸೌದಿ ಅರೇಬಿಯಾದಲ್ಲಿ ಏಕಾಂಗಿಯಾಗುವುದನ್ನು ತಪ್ಪಿಸಲು ಭಾರತದಿಂದ ಹಜ್ ಯಾತ್ರೆಗೆ ತೆರಳುವ ಎಲ್ಲ ಯಾತ್ರಿಕರು ಕಡ್ಡಾಯವಾಗಿ ಹಂದಿಜ್ವರದ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದು ಯಾತ್ರಿಕರು ಅನುಸರಿಸಬೇಕಾದ ಅವಶ್ಯಕತೆಗಳಲ್ಲಿ ಒಂದಾಗಿದೆ.
ಈ ವಿಚಾರವನ್ನು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಶಶಿ ಥರೂರ್ ಘೋಷಿಸಿದ್ದಾರೆ. ವಿಶ್ವದೆಲ್ಲೆಡೆ ವ್ಯಾಪಿಸಿರುವ ಹಂದಿರೋಗದ ಮಾರಿಯ ಹಿನ್ನೆಲೆಯಲ್ಲಿ ಈ ವರ್ಷ ವಯೋವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಯಾತ್ರೆ ಮಾಡದಿರುವಂತೆ ಸಲಹೆ ಮಾಡಿದ್ದಾರೆ.
ರಾಷ್ಟ್ರಕ್ಕೆ ಪ್ರವೇಶಿಸುವ ವೇಳೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕಾರಣ ಹಾಜಿಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವೇಶ ದ್ವಾರದಲ್ಲಿ ಪ್ರತ್ಯೇಕಗೊಳ್ಳುವುದನ್ನು ತಡೆಯಲು ಇದು ಯಾತ್ರಿಕರಿಗೆ ನೀಡುವ ಸಲಹೆ ಎಂಬುದಾಗಿ ವಾರ್ಷಿಕ ಹಜ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು ನುಡಿದರು.
ಹಜ್‌ಯಾತ್ರೆ ತೆರಳುವ ಎಲ್ಲಾ ಯಾತ್ರಿಕರು ಖಡ್ಡಾಯವಾಗಿ ಕನಿಷ್ಠ ಎರಡು ವಾರಗಳ ಮುಂಚಿತವಾಗಿ ಎಚ್1ಎನ್1 ಸೋಂಕು ತಡೆ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದಾಗಿ ಸೌದಿ ಸರ್ಕಾರದ ಸಲಹೆ ಮಾಡಿದೆ. |