ತಮಿಳು ಹೆಸರಿರುವ ತಮಿಳು ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡಿ ತಮಿಳ್ನಾಡು ಸರ್ಕಾರ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಚ್.ಎಲ್. ಗೋಖಲೆ ಹಾಗೂ ಕೆ. ವೆಂಕಟರಾಮನ್ ಅವರುಗಳನ್ನೊಳಗೊಂಡ ವಿಭಾಗಿಯ ಪೀಠವು ಅರ್ಜಿಯ ವಿಚಾರಣೆವೇಳೆಗೆ ತೆರಿಗೆ ಸಂಗ್ರಹವು ರಾಜ್ಯಕ್ಕೆ ಬಿಟ್ಟ ವಿಚಾರ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿರುವ ಹಿಂದಿನ ತೀರ್ಪನ್ನು ಪ್ರಸ್ತಾಪಿಸಿತು.
"ಹೀಗಿರುವಾಗ ಈ ನ್ಯಾಯಾಲಯಕ್ಕೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ" ಎಂಬುದಾಗಿ ಹೇಳಿದ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾಗೊಳಿಸಿದರು.
ತಮಿಳ್ನಾಡು ಪೀಪಲ್ಸ್ ರೈಟ್ಸ್ ಫಾರಂ ಈ ಅರ್ಜಿಯನ್ನು ಸಲ್ಲಿಸಿದ್ದು, ಕಳೆದ ಮೂರು ವರ್ಷಗಳಿಂದ ತಮಿಳ್ನಾಡು ಮನರಂಜನಾ ತೆರಿಗೆ ಕಾಯ್ದೆಯು ಜಾರಿಯಲ್ಲಿದೆ ಎಂದು ಹೇಳಿದ್ದಾರಲ್ಲದೆ, ಪ್ರಸಕ್ತ ವಿನಾಯಿತಿಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ವರ್ಷಂಪ್ರತಿ ಸುಮಾರು 50 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿದರು.
ಕನ್ನಡ ಚಿತ್ರಗಳಿಗೆ ಇದನ್ನು ನಿರೀಕ್ಷಿಸಬಹುದೇ? ತಮಿಳು ಹೆಸರಿಡುವ ಮಕ್ಕಳಿಗೆ ಬಹುಮಾನ ಕೊಡುವುದಾಗಿ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿರುವುದು ನೆನಪಿರಬಹುದು. ಕಟ್ಟರ್ ಭಾಷಾಪ್ರೇಮಿಯೆಂದು ತೋರಿಸಿಕೊಳ್ಳುವ ಅವರ ಸರ್ಕಾರವೀಗ ತಮಿಳು ಚಿತ್ರಗಳಿಗೆ ಸಬ್ಸಿಡಿ ಮಾತ್ರವಲ್ಲದೆ, ತಮಿಳಿನ ಹೆಸರಿರುವ ಚಿತ್ರಗಳಿಗೆ ಸರ್ಕಾರ ತೆರಿಗೆ ವಿನಾಯಿತಿಯನ್ನೂ ನೀಡಿದೆ. ಇದು ಚಿತ್ರ ತಯಾರಕರಿಗೆ ತಮಿಳು ಹೆಸರಿಡಲು ಇನ್ನಷ್ಟು ಉತ್ತೇಜನ ನೀಡಬಹುದು.
ಈ ಸಂದರ್ಭದಲ್ಲಿ ಶಾಸ್ತ್ರೀಯ ಭಾಷೆಯೆಂಬ ಅರ್ಹತೆಯ ಹೊಸಿಲಲ್ಲಿ ನಿಂತಿರುವ ಕನ್ನಡ ಚಿತ್ರಗಳ ಹೆಸರುಗಳತ್ತ ಒಮ್ಮೆ ದೃಷ್ಟಿ ಹರಿಸೋಣ. ಲವ್ ಗುರು, ನಂದ ಲವ್ಸ್ ನಂದಿತಾ, ಸತ್ಯ ಇನ್ ಲವ್, ಆಕ್ಸಿಡೆಂಟ್, ದುನಿಯಾ, ಮೆಂಟಲ್ ಮಂಜ, ಜಾಲಿ ಡೇಸ್, ಟ್ಯಾಕ್ಸಿ ನಂ ವನ್, ಜಂಗ್ಲಿ, ಪ್ರೇಮ್ ಕಹಾನಿ, ವೆಂಕಟ ಇನ್ ಸಂಕಟ.... ಹೀಗೆ ಬೇಕಷ್ಟು ಪಟ್ಟಿ ಮಾಡಬಹುದು. ಇತ್ತೀಚೆಗೆ ಸುದ್ದಿಯಾಗಿದ್ದ ಟೈಟಲ್ ವಿವಾದವನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ ಚಿತ್ರದ ಹೆಸರುಗಳನ್ನಿಡುವ ಪರಿಪಾಠಕ್ಕೆ ಚಿತ್ರತಯಾರಕರು ಮುಂದಾಗಲು ಕನ್ನಡ ಸಿನಿಮಾಗಳಿಗೂ ಈ ಭಾಗ್ಯವನ್ನು ಕರ್ನಾಟಕ ಸರ್ಕಾರ ದಯಪಾಲಿಸುವುದೋ? |