ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ರಣಾಂಗಣ ಸಜ್ಜಾಗುತ್ತಿರುವಂತೆಯೇ, ಚುನಾವಣಾ ಮೂಡಿನಲ್ಲಿರುವ ಶಿವಸೇನೆಯು ಮುಂಬೈಯಲ್ಲಿ ರಾಜ್ಯದ ನಿಜವಾದ ನಿವಾಸಿಗಳು ಮಾತ್ರ ಮನೆ ಹೊಂದುವ ಭರವಸೆ ನೀಡಿದೆ.
ಮಹಾರಾಷ್ಟ್ರದ ಹೊರಗಿನವರಿಗೆ ಮನೆಗಳ ಅಂಗೀಕಾರ ಮಾಡಬಾರದು ಎಂಬುದಾಗಿ ಶಿವಸೇನೆಯ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಭವ್ ಠಾಕ್ರೆ ನೇತತ್ವದ ಸೇನಾ ಕಾರ್ಯಕರ್ತರು ಮುಂಬೈ ಮೆಟ್ರೋಪಾಲಿಟನ್ ರೀಜನಲ್ ಡೆವಲಪ್‌ಮೆಂಟ್ ಪ್ರಾಧಿಕಾರ(ಎಂಎಂಆರ್‌ಡಿಎ)ವನ್ನು ಒತ್ತಾಯಿಸಿದ್ದಾರೆ.
"ಮುಂದಿನ ಎರಡ್ಮೂರು ತಿಂಗಳಲ್ಲಿ ಶಿವಸೇನಾ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವಿದ್ದು, ನಮ್ಮ ಸರ್ಕಾರವು 500 ಚದರ ಅಡಿ ಜಾಗವನ್ನು ಮರಾಠಿ 'ಮಾನೂ'ಗಳಿಗೆ(ಮಹಾರಾಷ್ಟ್ರದ ನಿಜವಾದ ನಿವಾಸಿಗಳು) ಒದಗಿಸಲಿದೆ. ಹಾಗಾಗಿ ಮಹಾರಾಷ್ಟ್ರಿಗರು ನಿವಾಸಕ್ಕಾಗಿ ಮುಂಬೈ ತೊರೆಯುವ ಸಮಸ್ಯೆ ಇರುವುದಿಲ್ಲ" ಎಂದು ಸೇನೆ ಹೇಳಿಕೊಂಡಿದೆ. ಅಲ್ಲದೆ, ಮುಂಬೈಯಲ್ಲಿ ನಿವಾಸ ಹೊಂದಲು ಇತರರಿಗಿಂತ ಮರಾಠಿಗರು ಹೆಚ್ಚು ಅರ್ಹರು ಎಂಬುದಾಗಿ ಠಾಕ್ರೆ ಹೇಳಿದ್ದಾರೆ.
"ಮುಂಬೈಯಲ್ಲಿ ಎಂಎಂಆರ್‌ಡಿಎ ಬಡವರಿಗಾಗಿ ಮನೆಗಳನ್ನು ನಿರ್ಮಿಸುತ್ತದೆ. ಈ ಮನೆಗಳನ್ನೂ ಸಹ ಬಿಲ್ಡರ್ಸ್ ವಶಪಡಿಸಿಕೊಳ್ಳುತ್ತಾರೆ. ಬಿಹಾರ ಮತ್ತು ಬಾಂಗ್ಲಾದೇಶಗಳ ವಲಸಿಗರು ಮನೆಗಳಿಗೆ ಬೇಡಿಕೆ ಇಡುತ್ತಾರೆ. ನಾವು ಸೂಕ್ತ ನಿವಾಸವನ್ನು ಕೇಳುವುದು ನಮ್ಮ ಹಕ್ಕು" ಎಂದು ಠಾಕ್ರೆ ವಾದಿಸಿದ್ದಾರೆ.
ಕಳೆದ ತಿಂಗಳು ಎಂಎಂಆರ್‌ಡಿಎ ತಿಂಗಳೊಂದರ 800ರೂಗಳ ಕಡಿಮೆ ಬಾಡಿಗೆಗೆ 43 ಸಾವಿರ ಮನೆಗಳನ್ನು ಒದಗಿಸುವುದಾಗಿ ಘೋಷಿಸಿದೆ. ಮುಂಬೈಯಲ್ಲಿ ಕೊಳಗೇರಿಗಳನ್ನು ಕಡಿಮೆಗೊಳಿಸುವುದು ಇದರ ಉದ್ದೇಶ.
ಈ ವಸತಿಯೋಜನೆಯು ಮಹಾರಾಷ್ಟ್ರಿಗರಿಗೆ ಆದ್ಯತೆ ನೀಡಿದರೆ ಹೊರಗಿನವರು ಇಲ್ಲಿ ಠಿಕಾಣಿ ಹೂಡಲು ಉತ್ತೇಜನ ನೀಡುತ್ತದೆ ಎಂಬುದು ಶಿವಸೇನೆಯ ದೂರು.
ಅಕ್ಟೋಬರ್ ಒಳಗಾಗಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಮರಾಠಿಗರು ಮತ್ತು ವಲಸಿಗರ ವಿಚಾರಗಳು ಮತಕಸಿಯುವಲ್ಲಿ ಪ್ರಧಾನ ವಿಷಯಗಳಾಗಲಿವೆ. |