ಕಳೆದ ನವೆಂಬರ್ ತಿಂಗಳಲ್ಲಿ ಉಗ್ರರು ನಡೆಸಿದ ನರಮೇಧದಿಂದ ಚೇತರಿಸಿಕೊಂಡು ತನ್ನ ಕಾಯಕಕ್ಕೆ ಮರಳಿರುವ ಮುಂಬೈ ನಗರಿಯ ಮೇಲೆ ಮತ್ತೊಮ್ಮೆ ಅದಕ್ಕಿಂತಲೂ ಭೀಕರ ರೀತಿಯಲ್ಲಿ ಉಗ್ರರು ಅಟ್ಟಹಾಸ ಮೆರೆಯಲು ಸಂಚು ರೂಪಿಸಿರುವ ಘಟನೆಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಮೇಲೆ ಭಯೋತ್ಪಾದಕ ಕೃತ್ಯ ನಡೆಸಲು ಭಾರಿ ಸಂಚು ರೂಪಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಮುಂಬೈನ ನವಿ ಮುಂಬೈನ ರೈಲ್ವೆ ನಿಲ್ದಾಣ, ಮುಂಬೈಯ ಪ್ರಮುಖ ಬ್ಯಾಂಕ್, ಪ್ರಮುಖ ಸರಕಾರಿ ಕಚೇರಿಗಳು ಸೇರಿದಂತೆ ಮಹಾರಾಷ್ಟ್ರದ ಏಳು ಕಡೆಗಳಲ್ಲಿ ದುಷ್ಕೃತ್ಯ ಎಸಗಲು ಉಗ್ರರು ವ್ಯವಸ್ಥಿತ ತಯಾರಿ ನಡೆಸಿದ್ದಾರೆನ್ನಲಾಗಿದೆ. ಜುಲೈ 8ರ ಕಟ್ಟೆಚ್ಚರವು ಏಳು ಗುರಿಗಳ ಛಾಯಚಿತ್ರವನ್ನೂ ಹೊಂದಿದೆ.
ಕಳೆದ ವರ್ಷ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನೆಯ ಮಾದರಿಯಲ್ಲೇ ಇನ್ನೊಂದು ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ. ಕೆಟ್ಟ ಹವಾಮಾನ ಹಾಗೂ ಅಬ್ಬರದ ಅಲೆಗಳಿದ್ದರೂ, ಉಗ್ರರು ಸಮುದ್ರ ಮಾರ್ಗ ಅನುಸರಿಸುವ ಸಾಧ್ಯತೆ ಇದೆ ಎಂಬುದಾಗಿ ಗೃಹ ಸಚಿವ ಪಿ. ಚಿದಂಬರಂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಉದ್ದೇಶಿತ ದಾಳಿಯು ಈ ಎರಡು ವರ್ಷಗಳಲ್ಲಿ ಅತ್ಯಂತ ಗಂಭೀರ ಸ್ವರೂಪದ್ದು ಮತ್ತು ನಿಖರವಾದದ್ದು ಎಂದು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಸಮುದ್ರದ ಕಿನಾರೆಯಲ್ಲಿ ಬಾರಿ ಕಟ್ಟೆಚ್ಚರ ನಿಯೋಜಿಸಲಾಗಿದೆ ಎಂದು ಕೇಂದ್ರದ ಗೃಹ ಸಚಿವ ಪಿ. ಚಿದಂಬರಂ ಹೇಳಿದರು.
ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಬಂಧಿತವಾಗಿರುವ ಲಷ್ಕರ್ ಇ ತೋಯ್ಬಾ ಸಂಘಟನೆ ಉಗ್ರನ ಬಳಿ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಫೋಟೋಗಳು ಸಿಕ್ಕಿವೆ. ಕೇಂದ್ರ ಗುಪ್ತಚರ ಇಲಾಖೆ ಕೂಡಾ ಅದೇ ಮಾತನ್ನು ಹೇಳಿದ್ದು, ದಾಳಿಯ ಸಂಚು ಮತ್ತಷ್ಟು ದಟ್ಟವಾಗಿದೆ. ಅಲ್ಲದೇ ಯಾವ ದಿನಾಂಕದಂದು ಸ್ಫೋಟ ನಡೆಸಬೇಕು ಎಂಬುದನ್ನು ಕೂಡಾ ಉಗ್ರರು ನಿಗದಿಪಡಿಸಿರುವ ಅಂಶವನ್ನು ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ. ಆದರೆ, ಲಷ್ಕರ್ ಉಗ್ರರಿಗೆ ಸ್ಥಳೀಯ ಸಹಕಾರದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಚಿದಂಬರಂ ತಿಳಿಸಿದರು.
ಜಮ್ಮುವಿನಲ್ಲಿ ಬಂಧಿತನಾದ ಉಗ್ರನಿಂದ ಫೋಟೋಗಳನ್ನು ವಶಪಡಿಸಿಕೊಂಡಿರುವ ಬಳಿಕ ಜುಲೈ 8ರ ಎಚ್ಚರಿಕೆ ನೀಡಲಾಗಿದೆ. ಬಾಂಬೆ ಹೈಕೋರ್ಟ್ ಸಮೀಪದ ಒಂದು ಪ್ರತಿಷ್ಠಿತ ಬ್ಯಾಂಕ್, ಎರಡು ರೈಲ್ವೈ ನಿಲ್ದಾಣಗಳು, ಮುಂಬೈಯಲ್ಲಿ ಎರಡು ರೈಲ್ವೇ ನಿಲ್ದಾಣಗಳು ಹಾಗೂ ನವಿಮುಂಬೈಯಲ್ಲಿ ಒಂದು ರೈಲ್ವೇ ನಿಲ್ದಾಣ ಸೇರಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಗ್ರರು ಯಾವದಿನದಂದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದಾರೆ ಎಂದೂ ಹೇಳಲಾಗಿದ್ದು, ಅದರಲ್ಲಿ ಒಂದು ದಿನಾಂಕ ಈಗಾಗಲೇ ಕಳೆದು ಹೋಗಿದೆ.
|