ಇತ್ತೀಚೆಗೆ ಅಂತ್ಯಗೊಂಡ ಲೋಕಸಭಾ ಚುನಾವಣೆ ವೇಳೆ ಮುಸ್ಲಿಮರ ವಿರುದ್ಧ ಹಗೆ ಭಾಷಣ ಮಾಡಿರುವ ಆರೋಪ ಹೊತ್ತ ಬಿಜೆಪಿ ಸಂಸದ ವರುಣ್ ಗಾಂಧಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಬುಧವಾರ ಇಲ್ಲಿನ ಚೀಫ್ ಜುಡಿಶಿಯಲ್ ಮ್ಯಾಜೆಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. " ಬಾರ್ಖೆರ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 153ಎ(ಧಾರ್ಮಿಕ ಆಧಾರದಲ್ಲಿ ದ್ವೇಷದ ಉತ್ತೇಜನ), ಹಾಗೂ 125ರ ಹಾಗೂ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಾಯ್ದೆಯನ್ವಯ ಮಾರ್ಚ್ 17ರಂದು ದಾಖಲಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿ ಮಣಿ ರಾಮ ರಾವ್ ಅವರು ಇಂದು ಮಧ್ಯಾಹ್ನ ಆರೋಪಪಟ್ಟಿ ಸಲ್ಲಿಸಿದ್ದಾರೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ.29 ರ ಹರೆಯದ ವರುಣ್ ಗಾಂಧಿ ಅವರನ್ನು ಈ ಸಂಬಂಧ ಮಾರ್ಚ್ 29ರಂದು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಅವರು ಪ್ರಸಕ್ತ ಜಾಮೀನಿನಲ್ಲಿದ್ದಾರೆ. ಆರೋಪಪಟ್ಟಿ ಸಲ್ಲಿಸಲು ಉತ್ತರಪ್ರದೇಶ ಸರ್ಕಾರವು ಜುಲೈ 3ರಂದು ಫಿಲಿಬಿತ್ ಪೊಲೀಸರಿಗೆ ಅನುಮತಿ ನೀಡಿತ್ತು. |