ಶಿಕ್ಷಣದಿಂದ 'ಕೋಮುವಾದ ಮತ್ತು ರಾಜಕೀಯ'ವನ್ನು ದೂರವಿಡಬೇಕು ಎಂದು ಹೇಳಿದ ಬಿಜೆಪಿ, ಅಧ್ಯಯನವನ್ನು 'ಮಾನವೀಯಗೊಳಿಸಬೇಕು' ಮತ್ತು ಅದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಮೂಡಿಸುವಂತೆ ಮಾಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಒತ್ತಾಯಿಸಿತು.
ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಅನುದಾನ ಕುರಿತು ಲೋಕಸಭೆಯಲ್ಲಿ ಬುಧವಾರ ಚರ್ಚೆ ಆರಂಭಿಸಿದ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ, ಬಿಜೆಪಿಯ ಮುರಳಿ ಮನೋಹರ ಜೋಷಿ, ತಮ್ಮ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕಾಂಗ್ರೆಸಿನ ಅರ್ಜುನ್ ಸಿಂಗ್ ವಿರುದ್ಧ ಕೆಂಡ ಕಾರಿ, ಆತ 'ಕೋಮುವಾದದ ಅಜೆಂಡಾ'ವನ್ನು ಅನುಸರಿಸಿ ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು.
ನಿಮ್ಮ ಹಿಂದಿನ ಸಚಿವರು (ಅರ್ಜುನ್ ಸಿಂಗ್) ಶಿಕ್ಷಣದಲ್ಲಿ ಕೋಮು ಶಕ್ತಿಗಳನ್ನು ಅಳವಡಿಸಿದರು, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸಿದರು. ಶೈಕ್ಷಣಿಕ ಸುಧಾರಣೆಯ ಅಜೆಂಡಾವು ಕೋಮುವಾದ ಆಗಿರಬಾರದು ಎಂದು ಜೋಷಿ ಒತ್ತಾಯಿಸಿದರು.
ಶಿಕ್ಷಣದ ಸುಧಾರಣೆಯು ಕೇವಲ ರಾಜಕೀಯ ಲಾಭದ ಉದ್ದೇಶ ಹೊಂದಿದ್ದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂದ ಅವರು, ಯಶಪಾಲ್ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಆತುರ ಬೇಡ, ಯಾಕೆಂದರೆ ಅದನ್ನು ಕೂಡ ಆತುರಾತುರವಾಗಿಯೇ ಸಿದ್ಧಪಡಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ ಎಂದು ಸರಕಾರಕ್ಕೆ ಕೇಳಿಕೊಂಡರು.
ಶಿಕ್ಷಣ ಸುಧಾರಣೆ ಕುರಿತಾಗಿ ಕೊಠಾರಿ ಸಮಿತಿಯು ವರದಿ ಸಲ್ಲಿಸಿ ನಾಲ್ಕು ದಶಕಗಳೇ ಸಂದರೂ, ಅದರಲ್ಲಿನ ಶಿಫಾರಸುಗಳನ್ನು ಪರಿಗಣಿಸುವ ಗೋಜಿಗೆ ಯಾವುದೇ ಸರಕಾರಗಳೂ ಹೋಗಲಿಲ್ಲ ಎಂದು ವಿಷಾದಿಸಿದ ಅವರು, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕೆಂಬ ವಾದವನ್ನು ಬೆಂಬಲಿಸಿದರು. |