ಲೋಕಸಭೆಯಲ್ಲಿ ಭಾಷೆಯ ಬಳಕೆ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್ ಯಾದವ್ ಹಾಗೂ ಬಿಜೆಪಿ ಸಂಸದೆ ಮನೇಕಾ ಗಾಂಧಿ ನಡುವೆ ಬುಧವಾರ ಜಟಾಪಟಿ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಅರಣ್ಯೀಕರಣ ನಿಧಿ ಕುರಿತು ಪೂರಕ ಪ್ರಶ್ನೆಗಳನ್ನು ಕೇಳಲು ಎದ್ದು ನಿಂತ ಮನೇಕಾ ಗಾಂಧಿ ಇಂಗ್ಲೀಷಿನಲ್ಲಿ ಪ್ರಶ್ನೆ ಕೇಳಲು ಆರಂಭಿಸಿದರು. ಮಧ್ಯೆ ಮೂಗು ತೂರಿದ ಹಿಂದಿ ಭಾಷಾ ಪ್ರಿಯ ಮುಲಾಯಂ ಸಿಂಗ್ ಅವರು ನೀವು ಹಿಂದಿಯಲ್ಲೇ ಪ್ರಶ್ನಿಸಿ ಎಂದರು.
ಇದರಿಂದ ವ್ಯಗ್ರಗೊಂಡ ಮನೇಕಾ "ಮುಲಾಯಂ ಜೀ, ನನಗೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದೆನಿಸುತ್ತದೆಯೋ ಆ ಭಾಷೆಯಲ್ಲಿ ಮಾತನಾಡುತ್ತೇನೆ. ಯಾವಭಾಷೆಯಲ್ಲಿ ಮಾತನಾಡಬೇಕು ಎಂದು ನನಗೆ ಗೊತ್ತು" ಎಂದು ಖಾರವಾಗಿ ಪ್ರತಿಕ್ರಿಯೆಸಿ ಮುಲಾಯಂ ಬಾಯಿಮುಚ್ಚಿಸಿದರು.
ಇದಕ್ಕೆ ಮುನ್ನ ಉತ್ತರ ಪ್ರದೇಶ ಸರ್ಕಾರ ಮನಬಂದಂತೆ ಮರಕಡಿಯು ಕುರಿತು ಮುಲಾಯಂ ಕೇಳಿದ್ದ ಪ್ರಶ್ನೆಗೆ ಸಚಿವ ಜೈರಾಂ ರಮೇಶ್ ಇಂಗ್ಲೀಷಿನಲ್ಲಿ ಉತ್ತರಿಸಲು ಹೊರಟಾಗ, ಅವರಿಗೂ ಹಿಂದಿಯಲ್ಲಿ ಮಾತನಾಡುವಂತೆ ಪಾಠ ಮಾಡಿದ ಮುಲಾಯಂ ಸಿಂಗ್ "ನಿಮಗೆ ಹಿಂದಿ ಬರುತ್ತದೆ. ಹಿಂದಿಯಲ್ಲೇ ಉತ್ತರಿಸಿ. ಇದು ಲಂಡನ್ ಅಲ್ಲ" ಎಂದರು. ಮಣಿದ ಜೈರಾಂ ಅವರು ಇಂಗ್ಲೀಷಿನಿಂದ ಹಿಂದಿಗೆ ಬದಲಿದರು.
ಲಾಲೂ ಇಂಗ್ಲೀಷ್ ಲಾಲೂ ಪ್ರಸಾದ್ ಯಾದವ್ ಅವರು ಜಾಗತಿಕ ತಾಪಮಾನದ ಕುರಿತು ಮಾತನಾಡುತ್ತಾ ಗ್ಲೋಬಲ್ ವಾರ್ಮಿಂಗ್ ಬದಲು, ಗ್ಲೋಬಲ್ ವಾರ್ನಿಂಗ್ ಎಂದರು. ಪಕ್ಕದಲ್ಲಿದ್ದ ಸಿಪಿಎಂ ನಾಯಕ ಬಸುದೇವ್ ಇದನ್ನು ಬೆಟ್ಟು ಮಾಡಿದಾಗ ಲಾಲೂ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ, "ನಿಮಗಿಂತ ಚೆನ್ನಾಗಿ ಇಂಗ್ಲೀಷ್ ಬರುತ್ತೆ" ಎಂದು ತಿರುಗೇಟು ನೀಡಿದರು |