ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಅವರನ್ನು ಇಲ್ಲಿ ಗುರುವಾರ ಬಂಧಿಸಲಾಗಿದೆ.
ಬಂಧನಕ್ಕೀಡಾಗಿರುವ ಜೋಷಿ ಅವರನ್ನು ನ್ಯಾಯಾಧೀಶ ಪ್ರಶಾಂತ್ ಕುಮಾರ್ ಎದುರು ಹಾಜರು ಪಡಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರೀಟಾ ಅವರು ಮಾಯಾವತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಇವರು ಬುಧವಾರ ರಾತ್ರಿ ದೆಹಲಿಗೆ ತೆರಳುತ್ತಿದ್ದ ವೇಳೆ ಗಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ.
"ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷೆನ್ 153ಎ(ಉದ್ರೇಕಕಾಗಿ ಭಾಷಣ) ಮತ್ತು ಸೆಕ್ಷನ್ 109 (ನಿಂದನಾ ಭಾಷೆಯ ಬಳಕೆ) ಹಾಗೂ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಲಾಗಿದೆ" ಎಂದು ಎಡಿಜಿಪಿ ಬ್ರಿಜ್ ಲಾಲ್ ಹೇಳಿದ್ದಾರೆ.
ರೀಟಾ ಮನೆಗೆ ಬೆಂಕಿ ಅತ್ಯಂತ ಭದ್ರತಾ ವಲಯದಲ್ಲಿನ, ಸಚಿವಾಲಯಕ್ಕೆ ಸನಿಹವಾಗಿರುವ ರೀಟಾ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಶಂಕಿತ ಬಿಎಸ್ಪಿ ಕಾರ್ಯಕರ್ತರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.
ಮನೆಯ ಒಂದು ಭಾಗ ಬೆಂಕಿಯಿಂದ ಸುಟ್ಟುಹೋಗಿದೆ. ಅಲ್ಲದೆ ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ. ಯಾವದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲಾಗಿದ್ದು, ರೀಟಾ ನಿವಾಸದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತು ಅವರ ಅಲಹಾಬಾದ್ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ ಎಂದು ಬ್ರಿಜ್‌ಲಾಲ್ ತಿಳಿಸಿದ್ದಾರೆ.
ರೀಟಾ ಏನು ಹೇಳಿದ್ದರು? ಮೊರಾದಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೀಟಾ ಅವರು ಮಾಯಾ ಸರ್ಕಾರದ ಕಾರ್ಯಶೈಲಿಯನ್ನು ಟೀಕಿಸುತ್ತಾ, ಅತ್ಯಾಚಾರ ಬಲಿಪಶುಗಳು ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಲಿಯಾದವರನ್ನು ಭೇಟಿಯಾಗಲು ಡಿಜಿಪಿಯವರನ್ನು ಕಳುಹಿಸಿ 25 ಸಾವಿರ ಪರಿಹಾರ ನೀಡುವ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದರು. ಈ ವೇಳೆ "ಒಂದು ಹೆಣ್ಣಿನ ಶೀಲಕ್ಕೆ ಸರಕಾರ ಬೆಲೆ ಕಟ್ಟುತ್ತಿದೆ. ಇದೇ ರೀತಿ ಮುಖ್ಯಮಂತ್ರಿ ಮಾಯಾವತಿಗೇನಾದರೂ ಆದರೆ, ನಾವು ಒಂದು ಕೋಟಿ ರುಪಾಯಿ ಪರಿಹಾರ ನೀಡಲು ಸಿದ್ಧ" ಎಂಬ ವಿವಾದಕಾರಿ ಹೇಳಿಕೆಯನ್ನು ರೀಟಾ ಜೋಶಿ ನೀಡಿದ್ದರು.
ವಿಷಾದ ಬಂಧನದ ಬಳಿಕ ಪ್ರತಿಕ್ರಿಯಿಸಿರುವ ರೀಟಾ "ನಾನು ಮಹಿಳಾ ಚಳುವಳಿಯ ಉತ್ಪನ್ನ. ಮಹಿಳೆಯರ ಬಗ್ಗೆ ನನ್ನಲ್ಲಿ ಗೌರವವಿವೆ. ಹೆಲಿಕಾಫ್ಟರಿನಲ್ಲಿ ಪ್ರಯಾಣಿಸಿದ ಡಿಜಿಪಿ ಬಲಿಪಶುಗಳಿಗೆ 25,000 ರೂಪಾಯಿ ಪರಿಹಾರ ನೀಡುವ ಕ್ರಮ ನಾಚಿಕೆಗೇಡಿನದ್ದು" ಎಂದು ಪುನರುಚ್ಚರಿಸಿದ್ದಾರೆ.
ನನ್ನ ಹೇಳಿಕೆ ಮುಖ್ಯಮಂತ್ರಿಗಳಿಗೆ ನೋವುಂಟುಮಾಡಿದ್ದಲ್ಲಿ ತಾನು ತೀವ್ರ ವಿಷಾದ ಪಡಿಸುತ್ತೇನೆ ಎಂದು ರೀಟಾ ಹೇಳಿದ್ದಾರೆ. |