ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಅವರು ನೀಡಿರುವ ಅವಮಾನಕಾರಿ ಹೇಳಿಕೆ ಕುರಿತು ತಮ್ಮ ಮೌನ ಮುರಿದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರೀಟಾ ಹೇಳಿಕೆಯು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರಾದರೂ, ಉತ್ತರ ಪ್ರದೇಶ ಸರ್ಕಾರವು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಅತಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೀಟಾರಂತಹ ಹಿರಿಯ ನಾಯಕಿಯೊಬ್ಬರು ಇಂತಹ ಹೇಳಿಕೆ ನೀಡಿರುವುದರಿಂದ ಸೋನಿಯಾ ತೀವ್ರ ಅಸಂತುಷ್ಟರಾಗಿದ್ದು, ಅವರ ಈ ರೀತಿಯ ಹೇಳಿಕೆಯ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆಂದು ಅವರ ಸನಿಹದ ಮೂಲಗಳು ಹೇಳಿವೆ.
ಬಹುಗುಣ ಈ ಹೇಳಿಕೆ ನೀಡಲು ಕಾರಣವೇನು ಎಂದು ವಿವರಣೆ ಕೋರಲು ಪಕ್ಷವು ಸಿದ್ಧತೆ ನಡೆಸಿದೆ.
ಆದರೆ, ಈ ಹೇಳಿಕೆಗಾಗಿ ರೀಟಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಮಾಯಾವತಿ ಸರ್ಕಾರ, ತನ್ನ ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಗೂಂಡಾಗಿರಿ ಮಾಡುತ್ತಿದೆ ಎಂದು ಸೋನಿಯಾ ಹೇಳಿದ್ದಾರೆಂದು ಮೂಲಗಳು ಹೇಳಿವೆ. |