ತೊಂಬತ್ತರ ಹರೆಯದ ವ್ಯಕ್ತಿಯೊಬ್ಬರು ತನ್ನ ಘಟವಾಣಿ ಪತ್ನಿಯ ಉಪಟಳ ತಾಳಲಾರದೆ ಮುಕ್ತಿ ಯಾಚಿಸಿ ವಿಚ್ಛೇದನಕ್ಕಾಗಿ ನ್ಯಾಯಾಲಕ್ಕೆ ಮೊರೆ ಹೋಗಿರುವ ಅಪರೂಪದ, ಕುತೂಹಲಕಾರಿ ಘಟನೆ ವರದಿಯಾಗಿದೆ.
ಇದು ಎಲ್ಲೂ ಇಂಗ್ಲೇಂಡೋ, ಇಲ್ಲ ಅಮೇರಿಕದಲ್ಲೂ ಅಲ್ಲ. ಭಾರತದ ಚೆನ್ನೈಯಲ್ಲಿ. 60 ವರ್ಷಗಳ ಹಿಂದೆ ವರಿಸಿದ 80ರ ಹರೆಯದ ತನ್ನ ಧರ್ಮಪತ್ನಿ ತನ್ನನ್ನು ತ್ಯಜಿಸಿ ಕ್ರೂರತ್ವ ಮೆರೆದಿರುವುದಾಗಿ ಅವರು ಕುಟುಂಬ ನ್ಯಾಯಲಯದಲ್ಲಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಹೇಳಿದ್ದಾರೆ.
ಇವರ ದಾಂಪತ್ಯ 50 ವರ್ಷಗಳ ಕಾಲ ಚೆನ್ನಾಗೇ ಇತ್ತು. ಆದರೆ ಯಾವಾಗ ಈ ವೃದ್ಧ ದಂಪತಿಗಳು ತಮ್ಮ ನಾಲ್ವರು ಪುತ್ರರೊಂದಿಗೆ ಸೇರಿ ಪಾಲುದಾರಿಕೆಯಲ್ಲಿ ವ್ಯಾಪಾರ ಒಂದನ್ನು ಸ್ಥಾಪಿಸದರೋ ಆವಾಗಿಂದ ಸಮಸ್ಯೆ ಹುಟ್ಟಿಕೊಂಡಿತ್ತು. ವ್ಯಾಪಾರ ನಷ್ಟಕ್ಕೀಡಾದಾಗ ಪರಿಸ್ಥಿತಿ ಹದಗೆಟ್ಟಿತ್ತು.
ನಷ್ಟಕ್ಕೆ ಅಪ್ಪನೇ ಕಾರಣ ಎಂದು ಪುತ್ರರು ಗೂಬೆಕೂರಿಸಿದರು. ಇದು ಅಪ್ಪ ಮಕ್ಕಳ ನಡುವೆ ಮನಸ್ಥಾಪ ತಂದಿಟ್ಟಿತು. ಈ ಎಲ್ಲ ಜಂಜಡದಲ್ಲಿ ಇವರ ಪತ್ನಿ, ಪತಿಯನ್ನು ತೊರೆದು ಪುತ್ರರೊಂದಿಗೆ ವಾಸಿಸಲಾರಂಭಿಸಿದರು. ಇದು ಪತಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತ ವ್ಯಾಪಾರವು ಇಲ್ಲ, ಅತ್ತ ಪತ್ನಿಯೂ ಇಲ್ಲದ ಸ್ಥಿತಿ. ಇಷ್ಟೆಲ್ಲ ಉಪಟಳ ನೀಡಿ ಇದ್ದೂ ಇಲ್ಲದಂತಿರುವ ಈ ಪತ್ನಿಯೊಂದಿಗೆ ಸಂಪೂರ್ಣ ಸಂಬಂಧ ಕಡಿದುಕೊಳ್ಳವುದೀಗ ಅವರ ಇಚ್ಛೆ.
ತನ್ನ ಪುತ್ರರೊಂದಿಗೆ ಸೇರಿದ ಪತ್ನಿ ತನ್ನನ್ನು ನಿಂದಿಸಲಾರಂಭಿಸಿ, ಕ್ರೂರವಾಗಿ ನಡೆಸಿಕೊಂಡಿದ್ದು, ಇದರಿಂದ ಬೇಸತ್ತ ತಾನು ಡೈವೋರ್ಸಿಗೆ ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದವಾರ ಈ ಪ್ರಕರಣ ವಿಚಾರಣೆಗೆ ಬಂದಿದ್ದು, ಮುಂದಿನ ವಿಚಾರ ಆಗಸ್ಟ್ 17ರಂದು ನಡೆಯಲಿದೆ.
1949ರಲ್ಲಿ ವಿವಾಹವಾಗಿ ಅರುವತ್ತು ವರ್ಷಗಳ ದಾಂಪತ್ಯ ನಡೆಸಿರುವ ಈ ದಂಪತಿಗಳಿಗೆ ಇಬ್ಬರು ಪುತ್ರಿಯರೂ ಇದ್ದಾರೆ. |