ಹಿಂದೂ ವಿವಾಹದಲ್ಲಿ ವಧುವಿನ ಕತ್ತಿಗೆ ವರ ಮಂಗಳಸೂತ್ರ ಕಟ್ಟುವುದು ಕಡ್ಡಾಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿರುವ ಮೂಲಕ, ತಾನು ವಿವಾಹಿತೆ ಎಂಬುದಾಗಿ ಸಾಬೀತು ಪಡಿಸಲು ಕಳೆದ 21 ವರ್ಷಗಳಿಂದ ಹೋರಾಡುತ್ತಿರುವ ಮಹಿಳೆಗೆ ಕೊನೆಗೂ ನ್ಯಾಯ ಲಭಿಸಿದೆ." ಹಿಂದೂಗಳ ನಡುವಿನ ವಿವಾಹದ ಸಾಬೀತಿಗೆ ವರ ವಧುವಿನ ಕತ್ತಿಗೆ ಮಂಗಳಸೂತ್ರ ಕಟ್ಟುವುದು ಕಡ್ಡಾಯವೇನಲ್ಲ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರದ ಯಾವುದೇ ರೀತಿಯ ವಿಧಿಗಳು ವಿವಾಹವನ್ನು ಸಾಬೀತು ಪಡಿಸಲು ಸಾಕಾಗುತ್ತದೆ" ಎಂದು ವಿವಾಹದ ಸಿಂಧುತ್ವವನ್ನು ಎತ್ತಿಹಿಡಿದಿರುವ ವಿಚಾರಣಾ ನ್ಯಾಯಾಲಯದ ವಿರುದ್ಧದ ಅರ್ಜಿಯ್ನು ವಜಾಗೊಳಿಸುತ್ತಾ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಹೇಳಿದ್ದಾರೆ.ಮಹಿಳೆಯ ಪ್ರಕಾರ, ಆಕೆ ಕಲಾಧರ್ ಎಂಬಾತನೊಂದಿಗೆ 1987ರಲ್ಲಿ ಡಿಸೆಂಬರ್ 13ರಂದು ವಿವಾಹವಾಗಿದ್ದರು. ಆಕೆ ಗರ್ಭವತಿಯಾದ ಬಳಿಕ ಸ್ಥಳಿಯ ದೇವಾಲಯ ಒಂದರಲ್ಲಿ, ಪೂಜಾರಿಯ ಸಮಕ್ಷಮದಲ್ಲಿ ಹಾರಬದಲಾಯಿಸಿಕೊಳ್ಳುವ ಮೂಲಕ ವಿವಾಹವಾಗಿದ್ದರು. ಇದಾದ ಬಳಿಕ ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡಿ ಐದು ತಿಂಗಳ ಬಳಿಕ ತನ್ನನ್ನು ತ್ಯಜಿಸಿದ ಎಂದು ಆಕೆ ಆರೋಪಿಸಿದ್ದಾರೆ. ತನ್ನ ಮಗುವೂ 1988ರ ಜುಲೈ 6ರಂದು ಸಾವನ್ನಪ್ಪಿತು ಎಂದು ಮಹಿಳೆ ಹೇಳಿದ್ದಾರೆ.ಇದಾದ ಬಳಿಕ ಕಲಾಧರನೊಂದಿಗಿನ ತನ್ನ ವಿವಾಹ ಸಿಂಧುವೆಂದು ಘೋಷಿಸಬೇಕು ಎಂದು ಆಕೆ ಮೊಕದ್ದಮೆ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು 1998ರ ವಿವಾಹವನ್ನು ಸಿಂಧು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕಲಾಧರ 1999ರಲ್ಲಿ ಹೈಕೋರ್ಟಿಗೆ ಮೇಲ್ಮನವಿ ಅರ್ಜಿಸಲ್ಲಿಸಿದ್ದರು. ಹೈಕೋರ್ಟ್ ಪ್ರಕರಣವನ್ನು 2004ರಲ್ಲಿ ಮಧುರೈ ಪೀಠಕ್ಕೆ ವರ್ಗಾಯಿಸಿತ್ತು.ತನ್ನ ಕತ್ತಿಗೆ ಮಂಗಳಸೂತ್ರ ಕಟ್ಟಿರುವುದನ್ನು ಸಾಬೀತುಪಡಿಸಲು ಮಹಿಳೆ ವಿಫಲವಾಗಿದ್ದಾಳೆ ಎಂದು ಕಲಾಧರ್ ವಾದಿಸಿದ್ದ. ಇದಕ್ಕೂ ಮುಂಚೆ ವಿವಾಹವೇ ನಡೆದಿರಲಿಲ್ಲ ಎಂಬುದಾಗಿ ಆತ ನಿರಾಕರಿಸಿದ್ದ. ಕಲಾಧರನ ಅರ್ಜಿಯನ್ನು ಗುರುವಾರ ವಜಾ ಮಾಡಲಾಗಿದೆ. |