ರಾಷ್ಟ್ರದ ಇಂಧನ ಸಚಿವರಾಗಿರುವ ಕಾರಣ ಸುಶಿಲ್ ಕುಮಾರ್ ಶಿಂಧೆಯವರು "ಹೆಚ್ಚು ವೋಲ್ಟೇಜ್ ಮತ್ತು ಶಾಕ್" ಹೊಂದಿದ್ದಾರೆ ಎಂದು ಸ್ಪೀಕರ್ ಮೀರಾಕುಮಾರ್ ಹೇಳಿದಾಗ ಲೋಕಸಭೆಯಲ್ಲಿ ಶುಕ್ರವಾರ ನಗೆಬುಗ್ಗೆಗಳು ಚಿಮ್ಮಿದವು.
ಶಿವಸೇನೆಯ ಅನಂತ್ ಗೀತೆ ಅವರು ಪ್ರಶ್ನೆಕೇಳಿದ ವೇಳೆ, ಉತ್ತರಿಸಿದ ಶಿಂಧೆ, "ಇಂಧನ ಸಚಿವರಾಗಿ ಅನುಭವ ಇರುವ ಕಾರಣ ನೀವು ಕಷ್ಟಕಷ್ಟದ ಪ್ರಶ್ನೆ ಕೇಳಿ ಶಾಕ್ ನೀಡುತ್ತೀರಿ" ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಮೇಡಂ ಸ್ಪೀಕರ್, ಹಾಸ್ಯಮಯವಾಗಿ ಮೇಲಿನಂತೆ ನುಡಿದರು.
ಮಳೆಯ ಕೊರತೆಯಿಂದಾಗಿ ಜಲವಿದ್ಯುತ್ ಉತ್ಪಾದನೆಯ ಕೊರತೆಯ ಕುರಿತು ಶಿಂಧೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಮತ್ತು ಗೀತೆ ಅವರು ಜಲವಿದ್ಯುತ್ ಯೋಜನೆಗಳ ಸಾಮರ್ಥ್ಯದ ಕುರಿತು ಸಂಪೂರ್ಣ ವಿವರಣೆ ಕೇಳಿದರು.
ಅಷ್ಟರಲ್ಲಿ, ಶಿಂಧೆ ಅವರು "ಗೀತೆ ಈ ಖಾತೆಯ(ಇಂಧನ) ಸಚಿವರಾಗಿದ್ದರು. ಹಾಗಾಗಿ ಕೆಲವೊಮ್ಮೆ ಅವರು ಶಾಕ್ ನೀಡುತ್ತಾರೆ" ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಶಿಂಧೆಯವರನ್ನುದ್ದೇಶಿಸಿ, "ನೀವೀಗ ಪವರ್ ಮಿನಿಸ್ಟರ್, ನಿಮ್ಮ ಬಳಿಯೀಗ ಹೆಚ್ಚು ವೋಲ್ಟೇಜ್ ಮತ್ತು ಶಾಕ್" ಇದೆ ಎಂದರು.
ಇದಕ್ಕೂ ಮುಂಚಿತವಾಗಿ, ಬಿಜೆಪಿಯ ಮುರಳಿ ಮನೋಹರ್ ಜೋಷಿ ಅವರು ಅತೀ ಉದ್ದವಾದ ಪ್ರಶ್ನೆಯೊಂದನ್ನು ಕೇಳಿದರು. ಇದಕ್ಕೆ ಪ್ರತಿಯಾಗಿ ಶಿಂಧೆ, "ಅವರು ಪ್ರೊಫೆಸರ್ ಆಗಿರುವ ಕಾರಣ ಉದ್ದುದ ಪ್ರಶ್ನೆಕೇಳುತ್ತಾರೆ" ಎಂದರು.
"ಪ್ರೊಫೆಸರ್ ಆಗಿದ್ದ ಪಂಡಿತ್‌ಜಿ(ಜೋಷಿ) ಅವರಿಗೆ ಉದ್ದುದ್ದ ಪ್ರಶ್ನೆಗಳನ್ನು ಕೇಳುವುದು ಮತ್ತು 45 ನಿಮಿಷಗಳ ಕಾಲ ಲೆಕ್ಚರ್ ಕೊಡುವುದು ಅಭ್ಯಾಸ. ಅವರು ನನ್ನನ್ನು ವಿದ್ಯಾರ್ಥಿಯಾಗಿ ಪರಿಗಣಿಸಿದರೆ, ನಾನೂ ಸಹ ಹಿರಿಯ ಸದಸ್ಯರಿಗೆ ತೃಪ್ತಿಯಾಗುವಂತೆ ಉದ್ದುದ್ದ ಉತ್ತರವನ್ನು ನೀಡುತ್ತೇನೆ" ಎಂದು ಶಿಂಧೆ ನುಡಿದರು.
ಶಿಂಧೆಯವರ ಈ ಹೇಳಿಕೆಗೆ ಜೋಷಿ ನಗುನಗುತ್ತಲೇ ಇದ್ದರು. |