ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ನೀಡಿರುವ ಹೇಳಿಕೆ ದುರದೃಷ್ಟಕರ ಎಂಬುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ. ರೀಟಾ ಅವರು ಬಳಸಿರುವ ಭಾಷೆ ದುರದೃಷ್ಟಕರವಾಗಿದೆ ಹಾಗೂ ಅದು ಸರಿಯಲ್ಲ ಎಂದು ಅವರು ತನ್ನ ಕ್ಷೇತ್ರ ಅಮೆಠಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಿಸಿದರು.
ಆದರೆ, ಜೋಷಿ ಅವರ ಭಾವನೆಗಳಿಗೆ ತನ್ನ ಸಹಮತವಿದೆ ಎಂದು ಮರುಕ್ಷಣದಲ್ಲೇ ನುಡಿದ ರಾಹುಲ್, ಉತ್ತರಪ್ರದೇಶದ ಬಿಎಸ್ಪಿ ಸರ್ಕಾರದ ಮೇಲೆ ಜನರ ಮನಸ್ಸಲ್ಲಿ ಸಿಟ್ಟು ಮನೆಮಾಡಿದೆ ಎಂದು ಹೇಳಿದರು.
"ಉತ್ತರಪ್ರದೇಶದ ಸರ್ಕಾರ ಬಡಜನತೆಗಾಗಿ ಕೆಲಸ ಮಾಡುವುದಿಲ್ಲ. ಇದು ಸರಿಯಾದ ಭಾವಾವೇಶ. ಎಲ್ಲೇ ಹೋಗಿ, ಉತ್ತರ ಪ್ರದೇಶದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ" ಎಂದು ರಾಹುಲ್ ದೂರಿದರು.
ಬಡವರಿಗಾಗಿ ಕೇಂದ್ರ ಸರ್ಕಾರವು ನೀಡಿರುವ ಹಣವು ಬಡಜನತೆಗೆ ತಲುಪಿದೆಯೇ ಎಂಬುದನ್ನು ಕಾಂಗ್ರೆಸ್ ಖಚಿತಪಡಿಸಿಕೊಳ್ಳಲಿದೆ ಎಂದು ಯುವನಾಯಕ ಹೇಳಿದರು. "ಬಡಜನತೆಗಾಗಿ ದೆಹಲಿಯು ನೀಡಿರುವ ಹಣವು ಅರ್ಹರಿಗೆ ತಲುಪುತ್ತಿದೆಯೇ ಎಂಬುದಾಗಿ ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ನಾವು ಕಳುಹಿಸುವ ದೊಡ್ಡ ಮೊತ್ತವು ಪೋಲಾಗುವುದು ಶ್ಲಾಘನೀಯವಲ್ಲ" ಎಂದು ಹೇಳಿದರು.
ರೀಟಾ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೇಠಿ ಸಂಸದ, ಅದು ಪಕ್ಷದ ಅಧ್ಯಕ್ಷರು ಹಾಗೂ ಇತರ ಹಿರಿಯ ನಾಯಕರಿಗೆ ಬಿಟ್ಟ ವಿಚಾರ ಎಂದು ನುಡಿದರು.
ಮೊರದಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿರುವ ರೀಟಾ ಅವರನ್ನು ಬಂಧಿಸಲಾಗಿದ್ದು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. |