ದೇಶದ ಪ್ರಜೆಗಳು ಕಡ್ಡಾಯವಾಗಿ ಮತದಾನ ಮಾಡಬೇಕು ಇಲ್ಲವೇ ದಂಡ/ಜೈಲು ಶಿಕ್ಷೆ ಎದುರಿಸಬೇಕು ಎಂಬ ಪ್ರಸ್ತಾವನೆಯುಳ್ಳ ಮಸೂದೆಯೊಂದನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.
ಪ್ರತಿಪಕ್ಷ ನಾಯಕ, ಬಿಜೆಪಿ ನೇತಾರ ಲಾಲ್ ಕೃಷ್ಣ ಆಡ್ವಾಣಿ ಅವರು ಈ ಕುರಿತು ಇತ್ತೀಚೆಗೆ ಸಲಹೆ ನೀಡಿದ್ದರು. ಸಂಸದ, ದೆಹಲಿ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜೆ.ಪಿ.ಅಗರ್ವಾಲ್ ಅವರು ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದರು.
ಕಡ್ಡಾಯ ಮತದಾನ ವಿಧೇಯಕ 2009, ಪ್ರಕಾರ, ಚುನಾವಣಾ ಆಯೋಗವು ಘೋಷಿಸಿದ ಚುನಾವಣೆಗಳಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತ ಹಾಕಬೇಕು, ಇಲ್ಲವಾದಲ್ಲಿ 500 ರೂ. ದಂಡ ಅಥವಾ ಎರಡು ದಿನಗಳ ಜೈಲು ಶಿಕ್ಷೆ ಇಲ್ಲವೇ ರೇಶನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾಪಗಳು ಇದರಲ್ಲಿವೆ.
ಮತ ಚಲಾಯಿಸಲು ನಿಫಲವಾದ ಸರಕಾರಿ ನೌಕರರಿಗೆ 10 ದಿನಗಳ ವೇತನ ಕಡಿತ ಅಥವಾ ಎರಡು ವರ್ಷಗಳ ಕಾಲ ಬಡ್ತಿ ವಿಳಂಬದ ಪ್ರಸ್ತಾಪವೂ ಇದರಲ್ಲಿದೆ.
ಸತತವಾಗಿ 15 ವರ್ಷ ಕಾಲ ಓಟು ಹಾಕಿದ ವ್ಯಕ್ತಿಗಳಿಗೆ ಸರಕಾರಿ ಹುದ್ದೆಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಆದ್ಯತೆ ದೊರಕಿಸಿ ಪ್ರೋತ್ಸಾಹಿಸುವ ಪ್ರಸ್ತಾವನೆಯನ್ನೂ ಇದರಲ್ಲಿ ಸೇರಿಸಲಾಗಿದೆ. ಗಂಭೀರವಾದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮತದಾನದಿಂದ ವಿನಾಯಿತಿ ನೀಡುವ ಪ್ರಸ್ತಾಪ ಇದರಲ್ಲಿದೆ. |