ಚುನಾವಣೆಯಲ್ಲಿ ಮತ ಯಂತ್ರ ಬಳಸಿದರೆ ಅನ್ಯಾಯವಾಗುತ್ತದೆ ಎಂಬ ಕೆಲವು ಪಕ್ಷಗಳ ಧ್ವನಿಗೆ ಮತ್ತಷ್ಟು ಪುಷ್ಟಿ ದೊರಕಿದೆ. ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ಗಳ ನಿಖರತೆ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ, ಈ ಮತ ಯಂತ್ರಗಳನ್ನು ಟ್ಯಾಂಪರ್ ಮಾಡಿ ಸುಲಭವಾಗಿ ಅಕ್ರಮ ಎಸಗಬಹುದಾಗಿದೆ ಎಂಬುದನ್ನು ಚುನಾವಣಾ ವೀಕ್ಷಣಾ ಸಂಸ್ಥೆ ಹಾಗೂ ಸರಕಾರೇತರ ಸಂಸ್ಥೆಯೊಂದು ತೋರಿಸಿಕೊಟ್ಟಿದೆ.ಅಕ್ರಮ ಎಸಗುವ ಸಾಧ್ಯತೆಗಳು ಹಾಗೂ ಮೊದಲೇ ಪ್ರೋಗ್ರಾಂ ಮಾಡಲಾದ ಚಿಪ್‌ಗಳನ್ನು ಈ ಎಲೆಕ್ಟ್ರಾನಿಕ್ ಮತ ಯಂತ್ರಗಳೊಳಗೆ ತೂರಿಸಲು ಸಾಧ್ಯ ಎಂದು ಪ್ರದರ್ಶನ ಸಹಿತ ವಿವರಣೆ ನೀಡಿದ ನೆಟ್ಇಂಡಿಯಾದ ಹರಿ ಕೆ.ಪ್ರಸಾದ್ ಹಾಗೂ ಎನ್‌ಜಿಒ ಎಲೆಕ್ಷನ್ ಗ್ರೂಪ್ ಸಂಚಾಲಕ ವಿ.ವಿ.ರಾವ್, ಈ ಚಿಪ್‌ಗಳನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಚಿಪ್‌ಗಳನ್ನು ತಮಗೆ ಬೇಕಾದಂತೆ ಪ್ರೋಗ್ರಾಂ ಮಾಡಿದರೆ ಒಬ್ಬ ಅಭ್ಯರ್ಥಿ ಅಥವಾ ಪಕ್ಷವು ಮತದಾನವಾದ ಶೇ.60ರಷ್ಟು ಓಟುಗಳನ್ನು ತನ್ನತ್ತ ಸೆಳೆದುಕೊಳ್ಳಬಹುದಾಗಿದೆ ಎಂದು ತೋರಿಸಿಕೊಟ್ಟರು.ಇಂತಹ ಸಂದರ್ಭದಲ್ಲಿ ತಮ್ಮ ಓಟು ಚಲಾಯಿಸುವ ಮೊದಲ 10 ಮತದಾರರು ಈ ಅಕ್ರಮದ ಆಧಾರವಾಗಿರುತ್ತಾರೆ. ಈ ಪ್ರೋಗ್ರಾಂ ಪ್ರಕಾರ ನಿರ್ದಿಷ್ಟ ಪಕ್ಷವೊಂದು ಶೇ.60 ಮತಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದರು.ಟ್ಯಾಂಪರ್-ಪ್ರೂಫ್ ಮತ ಯಂತ್ರಗಳ ರಚನೆಗೆ ಇರುವ ಏಕೈಕ ಮಾರ್ಗವಾಗಿ, ದೃಢೀಕರಣ ಟೂಲ್ ಒಂದನ್ನು ಇವಿಎಂ ತಯಾರಿಕಾ ಯಂತ್ರಗಳೇ ಹೊರತರುವ ಅಗತ್ಯವಿದೆ ಎಂದ ಅವರು, ಎಟಿಎಂನಲ್ಲಿ ವ್ಯವಹಾರ ಮಾಡಿದ ನಂತರ ರಶೀದಿ ದೊರೆಯುವಂತೆ, ಮತ ಯಂತ್ರಗಳಲ್ಲಿಯೂ ಓಟು ಹಾಕಿದ ಬಳಿಕ ಸ್ವಯಂಚಾಲಿತವಾಗಿ ರಶೀದಿಯೊಂದು ಬರುವಂತಾಗಬೇಕು ಎಂದು ಅವರು ಸಲಹೆ ನೀಡಿದರು. |