ಬಿಜೆಪಿಯಲ್ಲಿ ಅಸಮಾಧಾನಗೊಂಡವರ ಪಟ್ಟಿಯಲ್ಲಿ ಮತ್ತೊಬ್ಬರ ಸೇರ್ಪಡೆ. ರಾಜಕಾರಣಿಯಾಗಿ ಪರಿವರ್ತನೆಗೊಂಡ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ತಾವು ಪ್ರತಿನಿಧಿಸುತ್ತಿರುವ ಅಮೃತಸರ್ ಕ್ಷೇತ್ರದಲ್ಲಿ ತಮ್ಮ ಅನುಮತಿ ಇಲ್ಲದೆ ಟ್ರಸ್ಟ್‌ನ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಂಸತ್ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಸಿದ್ದುರವರ ಕ್ಷೇತ್ರದಲ್ಲಿ ಅವರ ಅನುಮತಿ ಕೇಳದೇ ಅಮೃತ್‌ಸರ್ ಅಭಿವೃದ್ದಿ ಟ್ರಸ್ಟ್‌ಗೆ ಹೊಸ ಅಧ್ಯಕ್ಷರಾಗಿ ಬಿಜೆಪಿಯ ರಾಜಿಂದರ್ ಮೋಹನ್ ಚಿನ್ನಾ ಅವರನ್ನು ಬಿಜೆಪಿ ವಿರೋಧಿ ಬಣ ನೇಮಕಗೊಳಿಸಿತ್ತು. ಈ ಟ್ರಸ್ಟ್ ನಗರದ ಅಭಿವೃದ್ಧಿ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದು, ಮಿಲಿಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.
ತನ್ನ ಕ್ಷೇತ್ರವಾಗಿರುವುದರಿಂದ ತನ್ನ ಸಲಹೆ ಕೇಳದೆಯೇ ಈ ನೇಮಕ ಮಾಡಲಾಗಿದ್ದು, ಸಿದ್ದು ತೀವ್ರ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಬಿಜೆಪಿಯ ಒಳಗಿನ ಅಸಮಾಧಾನವು ಮತ್ತೊಮ್ಮೆ ಹೊರಬಿದ್ದಂತಾಗಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಸದಸ್ಯರೊಬ್ಬರ ಹೇಳಿಕೆಯಂತೆ, ಎರಡು ವಾರಗಳ ಹಿಂದೆಯೇ ನೇಮಕಾತಿ ಮಾಡಲಾಗಿತ್ತು ಮತ್ತು ಅಂದಿನಿಂದಲೇ ಸಿದ್ದುರವರು ಅಸಮಾಧಾನಗೊಂಡಿದ್ದರು. ವರದಿಯ ಪ್ರಕಾರ ಆ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯದಿದ್ದರೆ ತಾವು ಲೋಕಸಭೆಗೇ ರಾಜೀನಾಮೆ ನೀಡುವುದಾಗಿ ಸಿದ್ದು ಬೆದರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇಂತಹ ಸ್ಥಾನಗಳಿಗೆ ಸಂಸದರು ತಮ್ಮ ಆಪ್ತರನ್ನು ನೇಮಕ ಮಾಡುವ ಹಂಬಲ ಹೊಂದಿರುತ್ತಾರೆ. ಆದರೆ ಸಿದ್ದುರವರನ್ನು ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. |