ಪಾಕಿಸ್ತಾನದೊಂದಿಗೆ ಮಾತುಕತೆ ಪುನರಾರಂಭಿಸಲು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಆಯಾ ಸಾರ್ವಭೌಮ ರಾಷ್ಟ್ರಗಳಿಗೇ ಬಿಟ್ಟ ವಿಚಾರ ಎಂದು ಹೇಳಿದರು.ಐದು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಕ್ಲಿಂಟನ್, ಮುಂಬೈಯಲ್ಲಿ 26/11 ಉಗ್ರಗಾಮಿ ದಾಳಿಯಲ್ಲಿ ಮಡಿದವರು ಮತ್ತು ವೀರಾವೇಶದಿಂದ ಹೋರಾಡಿದವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಯೋತ್ಪಾದನೆ ವಿರುದ್ಧದ ಯಾವುದೇ ಪ್ರಯತ್ನಗಳಿಗೆ ಅಮೆರಿಕದ ಸಂಪೂರ್ಣ ಸಹಕಾರವಿದೆ ಎಂದರು.ಮಾತುಕತೆ ಪುನರಾರಂಭಿಸಬೇಕೇ ಬೇಡವೇ ಎಂದು ತೀರ್ಮಾನಿಸುವುದು ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ನಾವು ಭಾರತದ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಅಮೆರಿಕ ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ಹಿಲರಿ ಹೇಳಿದರು.ಕಳೆದ ಆರು ತಿಂಗಳಲ್ಲಿ ಪಾಕಿಸ್ತಾನವು ಕೂಡ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಬದ್ಧತೆ ಪ್ರದರ್ಶಿಸುತ್ತಿದೆ ಎಂದೂ ಈ ಸಂದರ್ಭದಲ್ಲಿ ಆಕೆ ನುಡಿದರು.ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿ ಭಾರತ ಮತ್ತು ಚೀನಾಗಳು ಹೆಚ್ಚಿನ ಇಂಗಾಲವನ್ನು ಹೊರಸೂಸುತ್ತವೆ ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಮತ್ತು ಚೀನಾಗಳಂತಹ ದೇಶಗಳು ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾಡಿದ ತಪ್ಪು ಮಾಡಬಾರದು ಎಂಬುದು ನಮ್ಮ ಇಚ್ಛೆ ಎಂದು ಹಿಲರಿ ಹೇಳಿದರು. |