ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಶಾಸಕ ಜಿತೇಂದ್ರ ಸಿಂಗ್ ಅಲಿಯಾಸ್ ಬಬ್ಲೂ ಅವರ ವಿರುದ್ದ ಶನಿವಾರ ಮೊಕದ್ದಮೆ ದಾಖಲಿಸಲಾಯಿತು.
ಫೈಜಾಬಾದ್‌ನ ಬೈಕಾಪುರ ಕ್ಷೇತ್ರದ ಶಾಸಕ ಸಿಂಗ್ ವಿರುದ್ಧ ಹುಸೈನ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಡಿಐಜಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.
ಜುಲೈ 15 ರ ರಾತ್ರಿ ರಾಜ್ಯದ ರಾಜಧಾನಿಯಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ ಬಿಸ್ಪಿ ನಾಯಕರಾದ ಡಾ.ಸಿಂಗ್ ಮತ್ತು ಇಂತಜಾರ್ ಅಬ್ದಿಯ ವಿರುದ್ಧ ರೀಟಾ ದೂರು ಸಲ್ಲಿಸಿದ್ದರು.
ವಿಷಯವನ್ನು ತನಿಖೆ ಮಾಡಲಾಗುತ್ತದೆ ಮತ್ತು ತಪ್ಪು ಕಂಡಲ್ಲಿ ಆಡಳಿತ ಪಕ್ಷದ ನಾಯಕನ ವಿರುದ್ದ ಗಂಭೀರ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಿಐಜಿ ಹೇಳಿದರು. ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ಕು ಜನರನ್ನು ಬಂಧಿಸಲಾಗಿದೆ.
ಇದೇ ವೇಳೆ, ಜುಲೈ 15 ರ ಘಟನೆಗೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಪೊಲೀಸರೂ ಈ ಘಟನೆಯಲ್ಲಿ ಶಾಮೀಲಾಗಿರುವ ಕಾರಣ ಸಿಬಿಐ ತನಿಖೆಯ ಅವಶ್ಯಕತೆಯಿದೆ ಎಂದು ಕಾಂಗ್ರೆಸ್‌ನ ರಾಜ್ಯ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಜುಲೈ 15 ರಂದು ಮುಖ್ಯಮಂತ್ರಿ ಮಾಯಾವತಿ ವಿರುದ್ದ ಜೋಶಿ ವೈಯಕ್ತಿಕ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಿತ ಬಿಎಸ್ಪಿ ಕಾರ್ಯಕರ್ತರು ದಾಂಧಲೆ ನಡೆಸಿ, ರೀಟಾ ಮನೆಗೆ ಬೆಂಕಿ ಹಚ್ಚಿದ್ದರು. ಆದರೆ ರೀಟಾ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ಕಾಯಿದೆಯಡಿ ಕೇಸು ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.
ಪ್ರಸ್ತುತ ರೀಟಾ ಬಹುಗುಣ ಜೋಶಿ ಮೊರಾದಾಬಾದ್‌ನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. |