ಭಾರತದ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾನುವಾರ ಬೆಳಿಗ್ಗೆ ಮುಂಬೈನಿಂದ ನವದೆಹಲಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಸತತ 36ಗಂಟೆಗಳ ಕಾಲ ವಾಣಿಜ್ಯ ನಗರಿ ಮುಂಬೈಯಲ್ಲಿದ್ದ ಕ್ಲಿಂಟನ್ ಅವರು ಇಂದು ರಾಜಧಾನಿಗೆ ಆಗಮಿಸಲಿದ್ದು, ಮಹಿಳಾ ಕಾರ್ಯಕರ್ತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ಸಚಿವೆ ಹಿಲರಿ ಅವರು ವಿಶೇಷ ವಿಮಾನದಲ್ಲಿ ಇಂದು ಮಧ್ನಾಹ್ನ ದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಕ್ಲಿಂಟನ್ ಅವರು ಮುಂಬೈಯ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಮತ್ತು ಹೊಟೇಲ್‌ನಲ್ಲಿ ಎರಡು ರಾತ್ರಿಗಳ ಕಾಲ ತಂಗಿದ್ದರು. ಈ ಸಂದರ್ಭದಲ್ಲಿ ಅವರು ಪ್ರತಿಷ್ಠಿತ ಉದ್ಯಮಿಗಳಾದ ರತನ್ ಟಾಟಾ, ಅಂಬಾನಿ, ಓ.ಪಿ.ಭಟ್, ಸ್ವಾತಿ ಪಿರಾಮಲ್, ಸುಧಾ ಮೂರ್ತಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ತದನಂತರ ಸೆಲ್ಫ್ ಎಂಪ್ಲಾಯೆಡ್ ವುಮೆನ್ಸ್ ಅಸೋಸಿಯೇಶನ್‌ಗೆ ಕ್ಲಿಂಟನ್ ಭೇಟಿ ನೀಡಿದ್ದರು.
ರಾಜಧಾನಿ ಭೇಟಿಯಲ್ಲಿ ಕ್ಲಿಂಟನ್ ಅವರು ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಹಾಗೂ ವಿರೋಧಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಸೇರಿದಂತೆ ಹಲವಾರು ಗಣ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. |