ಗುಜರಾತ್‌ನ ಅಕ್ಷರಧಾಮದ ಮೇಲೆ ದಾಳಿ ನಡೆಸಿದ ಶಂಕಿತ ಪ್ರಮುಖ ಆರೋಪಿ ಶೌಕತುಲ್ಲಾನನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಆತನನ್ನು ಗುಜರಾತ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದಿಂದ ಬಂದಿಳಿದಿದ್ದ ಶೌಕತುಲ್ಲಾನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ವಿಷಯ ತಿಳಿದ ಕೂಡಲೇ ಗುಜರಾತ್ ಪೊಲೀಸ್ ತಂಡ ಆತನನ್ನು ಶನಿವಾರ ಮಧ್ಯರಾತ್ರಿ ತಮ್ಮ ವಶಕ್ಕೆ ತೆಗೆದುಕೊಂಡು ಗುಜರಾತ್‌ಗೆ ಕರೆದೊಯ್ದಿದ್ದಾರೆ. ಶೌಕತುಲ್ಲಾ ಘೋರಿ 2002ರಲ್ಲಿ ಅಕ್ಷರಧಾಮದ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋರಿಯನ್ನು ಬಂಧಿಸಿದ ವಿವರ ತಿಳಿದ ಕೂಡಲೇ ಗುಜರಾತ್ ಪೊಲೀಸರು ಜಾಮೀನು ರಹಿತ ವಾರಂಟ್‌ನೊಂದಿಗೆ ಹಾಜರಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ರಿಯಾದ್‌ನಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಘೋರಿ ತನ್ನ ಪತ್ನಿ ಮತ್ತು ನಾಲ್ಕು ಮಂದಿ ಮಕ್ಕಳೊಂದಿಗೆ ಜೆಡ್ಡಾದಿಂದ ಹೈದರಾಬಾದ್‌ಗೆ ಬಂದಿಳಿದಾಗ ಪೊಲೀಸ ಬಲೆಗೆ ಬಿದ್ದಿದ್ದ.
ಘೋರಿಯನ್ನು ರಹಸ್ಯ ತಾಣದಲ್ಲಿ ಗುಜರಾತ್ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. |