ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ, ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
'ನನ್ನ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ತಾನು ಆಗ್ರಹಿಸುತ್ತೇನೆ. ಇದು ನಮ್ಮ ಪಕ್ಷದ ಒತ್ತಾಯವೂ ಆಗಿದೆ'ಎಂದು ಈ ಸಂದರ್ಭದಲ್ಲಿ ಹೇಳಿದರು. ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಕುಸಿದಿದೆ. ನನ್ನ ಮನೆಗೆ ಬೆಂಕಿ ಹಚ್ಚಿರುವ ಪ್ರಕರಣದ ಹಿಂದೆ ಮಾಯಾ ಸರ್ಕಾರದ ಕುಮ್ಮಕ್ಕಿದೆ ಎಂದು ಮತ್ತೊಮ್ಮೆ ಗಂಭೀರವಾಗಿ ಆರೋಪಿಸಿದರು.
ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಹಿಂದೆ ನಿಜಕ್ಕೂ ಉತ್ತರಪ್ರದೇಶ ಸರ್ಕಾರದ ಕೈವಾಡವಿದೆ. ಇದು ಮಾಯಾವತಿ ಅವರ ನಿರ್ದೇಶನದಂತೆಯೇ ನಡೆದಿದೆ ಎಂದ ರೀಟಾ, ಯುಪಿ ಸರ್ಕಾರದ ಮೇಲೆ ತನಗೆ ವಿಶ್ವಾಸ ಇಲ್ಲ ಎಂದು ಹೇಳಿದರು.
ಜುಲೈ 15ರಂದು ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿಯವರು ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧಿತರಾಗಿದ್ದರು. ಅದೇ ವೇಳೆಯಲ್ಲಿ ಮಾಯಾ ಪಕ್ಷಕ್ಕೆ ಸೇರಿದವರೆನ್ನಲಾದ ದುಷ್ಕರ್ಮಿಗಳು ಜೋಶಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿ ಬೆಂಕಿ ಹಚ್ಚಿದ್ದರು.ನಂತರ ರೀಟಾ ಅವರಿಗೆ ಜುಲೈ 29ರವರೆಗೆ ಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
|