ಸಲಿಂಗಕಾಮವನ್ನು ಸಕ್ರಮಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪು ಕೇಂದ್ರ ಸರ್ಕಾರವನ್ನು ಗೊಂದಲದಲ್ಲಿ ಮುಳುಗಿಸಿದ್ದು, ಈ ಕುರಿತು ಅಂತಿಮ ನಿರ್ಧಾರದ ವಿವರಣೆ ನೀಡಲು ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚಿನ ಕಾಲಾವಕಾಶ ಕೋರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜ್ಯೋತಿಷಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 10ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಈ ಕುರಿತು ನಿಮ್ಮ ನಿಲುವೇನು ಎಂದು ಪ್ರಶ್ನಿಸಿತ್ತು. ಆದರೆ, ಇಷ್ಟು ದಿನ ಕಳೆದರೂ ಸರ್ಕಾರ ಅಫಿಡವಿತ್ ಸಲ್ಲಿಸಿಲ್ಲ. ಸೋಮವಾರ ಸಲಿಂಗಕಾಮದ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.ಆದರೆ ಸಲಿಂಗಕಾಮ ಸಕ್ರಮದ ಬಗ್ಗೆ ವಿವಿಧ ಧರ್ಮದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ನಿಲುವನ್ನು ತಳೆಯುವುದಿಲ್ಲ ಎಂದು ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಸಲಿಂಗಕಾಮದ ಕುರಿತು ಧಾರ್ಮಿಕ ನಾಯಕರ ವಿರೋಧದ ಬಗ್ಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿರುವ ಅಫಿಡವಿತ್‌ನಲ್ಲಿ ಪ್ರಮುಖವಾಗಿ ಉಲ್ಲೇಖಿಸುವುದಾಗಿ ಹೇಳಿದರು. |