ವಿದ್ಯಾರ್ಥಿನಿಯೊಬ್ಬಾಕೆಯನ್ನು ಪ್ರೀತಿಸಿ, ಆಕೆಯೊಂದಿಗೆ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರೇಮದ ಪಾಠ ಮಾಡಿದ್ದ 'ಲವ್ ಗುರು'ವನ್ನು ಪಟ್ನಾ ವಿಶ್ವವಿದ್ಯಾಲಯ ರೀಡರ್ ಹುದ್ದೆಯಿಂದ ವಜಾಗೊಳಿಸಲಾಗಿದೆ.
ರೀಡರ್ ಮಟುಕ ನಾಥ್ ಅವರ ಈ ನಡತೆಯ ಹಿನ್ನೆಲೆಯಲ್ಲಿ ತನಿಖಾ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ಶನಿವಾರ ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಶ್ಯಾಮ್‌ಲಾಲ್ ಭಾನುವಾರ ತಿಳಿಸಿದ್ದಾರೆ.
ರೀಡರ್ ಅವರ ಈ ನಡವಳಿಕೆ ಗುರು-ಶಿಷ್ಯರ ಸಂಬಂಧಕ್ಕೆ ಅಪಕೀರ್ತಿ ಉಂಟುಮಾಡಿದೆಯಲ್ಲದೆ, ವಿಶ್ವವಿದ್ಯಾನಿಲಯದ ಪ್ರತಿಷ್ಠೆಗ ಧಕ್ಕೆಯುಂಟುಮಾಡಿದೆ ಎಂದು ಸಿಂಡಿಕೇಟ್ ಸಭೆ ಅಭಿಪ್ರಾಯಿಸಿದೆ ಎಂದು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಎಸ್.ಐ. ಅಹ್ಸಾನ್ ಹೇಳಿದ್ದಾರೆ.
ತನ್ನ ಪ್ರೇಯಸಿ ವಿದ್ಯಾರ್ಥಿನಿಯೊಂದಿಗೆ ತರಗತಿಗೆ ತೆರಳಿ 2006ರಲ್ಲಿ ಜುಲೈ ತಿಂಗಳಲ್ಲಿ ಪ್ರೀತಿಯ ಪಾಠ ಮಾಡಿದ್ದ ಚೌಧರಿಯನ್ನು ಆ ಬಳಿಕ ಮೂರು ವರ್ಷಗಳ ಕಾಲ ಅಮಾನತ್ತಿನಲ್ಲಿರಿಸಲಾಗಿತ್ತು.
ಕಳೆದ ಲೋಕಸಭಾ ಚುನಾವಣೆ ವೇಳೆ ಪಟ್ನಾ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರಸಲ್ಲಿಸಿದ್ದರು. ಪ್ರೇಮ ಪಕ್ಷದ ಹೆಸರಿನಲ್ಲಿ ಸ್ಫರ್ಧಿಸಲು ಮುಂದಾಗಿದ್ದ ಅವರು, ತಾನು ಗೆದ್ದರೆ ಪ್ರೇಮಿಗಳಿಗಾಗಿಯೇ ಉದ್ಯಾನವನ ಒಂದನ್ನು ನಿರ್ಮಿಸುವುದಾಗಿ ಹೇಳಿದ್ದರು. ಆದರೆ ತಾಂತ್ರಿಕ ಕಾರಣದಿಂದ ಅವರ ನಾಮ ಪತ್ರ ತಿರಸ್ಕೃತಗೊಂಡಿತ್ತು.
|