ವಿಶ್ವಹಿಂದೂ ಪರಿಷತ್ತಿನ ಉಪಾಧ್ಯಕ್ಷ ಓಂಕಾರ್ ಭಾವೆ ಅವರು ಗುರುವಾರ ಮುಂಜಾನೆ ನಿಧನ ಹೊಂದಿದ್ದಾರೆ. ಉಸಿರಾಟದ ತೊಂದರೆ ಹಾಗೂ ಎದೆನೋವಿನಿಂದ ಬಳಲುತ್ತಿದ್ದ ಅವರಿಗೆ ಮರಣ ಕಾಲಕ್ಕೆ 85 ವರ್ಷ ವಯಸ್ಸಾಗಿತ್ತು.
ಭಾವೆ ಅವರನ್ನು ಜೂನ್ 27ರಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅವರು ಚೇತರಿಸಿಕೊಂಡಿರಲಿಲ್ಲ. ಗುರುವಾರ ಅವರ ಪರಿಸ್ಥಿತಿ ಹದಗೆಡುತ್ತಿದ್ದಂತೆ ಅವರನ್ನು ಆರ್.ಕೆ. ಪುರಂನಲ್ಲಿರುವ ಸಂಘಟನೆಯ ಕಚೇರಿಗೆ ತರಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.
ವಿಶ್ವಹಿಂದೂ ಪರಿಷತ್ತಿನ ಉನ್ನತ ನಾಯಕರಾದ ಗಿರಿರಾಜ್ ಕಿಶೋರ್ ಮತ್ತು ಅಶೋಕ್ ಸಿಂಘಾಲ್, ಆರೆಸ್ಸೆಸ್ ಮುಖಂಡ ಕೆ.ಎಸ್. ಸುದರ್ಶನ್ ಹಾಗೂ ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ, ರಾಜ್‌ನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಇತರರು ಭಾವೆ ಅವರ ಆತ್ಮಕ್ಕೆ ಶಾಂತಿ ಕೋರಿದರು.
1924ರ ಜುಲೈ 26ರಂದು ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ಜನಿಸಿದ ಭಾವೆ ಅವರು 1938ರಲ್ಲಿ ಆರೆಸ್ಸೆಸ್ ಸೇರಿದ್ದರು. ಪ್ರಯಾಗ್ ವಿಶ್ವವಿದ್ಯಾನಿಲಯದಲ್ಲಿ 1945ರಲ್ಲಿ ಪದವಿ ಪಡೆದ ಅವರು ಜೀವನ ಪರ್ಯಂತ ಪ್ರಚಾರಕರಾಗಿ ಸಂಘಕ್ಕೆ ಸೇವೆ ಸಲ್ಲಿಸಿದ್ದರು. |