ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧ ದಾಖಲಾಗಿದ್ದ ಲಂಡನ್ ಹೋಟೆಲ್ ಖರೀದಿ ಕುರಿತ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆಯಲು ಆಧಾರವಾಗಿರುವ ದಾಖಲೆಗಳನ್ನು ನೀಡುವಂತೆ ಅವರ ವಕೀಲರು ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಲಾಗಿದೆ.
ಹಲವು ನ್ಯಾಯಾಲಯಗಳ ತೀರ್ಪುಗಳು ಮತ್ತು ಕಾನೂನು ಆಯೋಗದ ವರದಿಗಳನ್ನು ಉದಾಹರಿಸಿರುವ ಜಯಲಲಿತಾರವರ ವಕೀಲ ನವನೀತ್ ಕೃಷ್ಣನ್, ತನ್ನ ಕಕ್ಷಿದಾರ ದಾಖಲೆಗಳ ಪ್ರತಿಗಳನ್ನು ಬಯಸಲು ಅಧಿಕಾರ ಹೊಂದಿದ್ದಾರೆ ಎಂದು ವಾದಿಸಿದರು.
ಈ ಪ್ರಕರಣವನ್ನು ತನಿಖಾ ದಳವು ಕೂಲಂಕಷವಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದ ಅವರು, ಪ್ರಕರಣ ಹಿಂತೆಗೆದುಕೊಳ್ಳಲು ಪೊಲೀಸರು ಒಪ್ಪಿಸಿದ ಸಾಕ್ಷ್ಯಾಧಾರಗಳು ಈ ಹಿಂದೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಕೇಸು ದಾಖಲಿಸಿದಾಗಲೂ ಪೊಲೀಸರ ಬಳಿ ಇದ್ದಿರಬಹುದು ಎಂದು ಹೇಳಿದರು.
ಸರಕಾರವು ಯಾವ ಆಧಾರದ ಮೇಲೆ ಪ್ರಕರಣವನ್ನು ಹಿಂಪಡೆಯಲು ಬಯಸುತ್ತಿದೆ ಎಂಬ ದಾಖಲೆಗಳು ಬೇಕೆಂದು ಮೇ 25ರಂದು ಎಐಎಡಿಎಂಕೆ ಮುಖ್ಯಸ್ಥೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನೀಗ ವಿಶೇಷ ನ್ಯಾಯಾಲಯವು ಆಗಸ್ಟ್ 27ರವರೆಗೆ ಮುಂದೂಡಿದೆ.
|