ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಬಿಜೆಪಿಯ ಮುರಳಿ ಮನೋಹರ್ ಜೋಷಿಗೆ ನೀಡಲಾಗಿರುವ ಎನ್‌ಎಸ್‌ಜಿ ಭದ್ರತೆಯನ್ನು ವಾಪಸು ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭದ್ರತಾ ವ್ಯವಸ್ಥೆಯನ್ನು ಕಡಿತಗೊಳಿಸುವ ವರದಿಯ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಎಸ್‌ಪಿ ಹಾಗೂ ಬಿಎಸ್ಪಿ ಸದಸ್ಯರು ಗದ್ದಲ ಎಬ್ಬಿಸಿದ ಪರಿಣಾಮ ಎರಡೂ ಸದನಗಳ ಕಲಾಪವನ್ನು ಎರಡೆರಡು ಬಾರಿ ಮುಂದೂಡಬೇಕಾಯಿತು.
ಮತ್ತೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಸಭಾಧ್ಯಕ್ಷರ ಪೀಠದತ್ತ ಮುನ್ನುಗ್ಗಿದ ಬಿಎಸ್‌ಪಿ ಸದಸ್ಯರು, ಸರ್ಕಾರದ ಪ್ರಸ್ತಾಪವನ್ನು ಪ್ರತಿಭಟಿಸಿದರು. ಶಾಂತಿ ಕಾಪಾಡುವಂತೆ ಸ್ಪೀಕರ್ ಮೀರಾಕುಮಾರ್ ಪದೇ ಪದೇ ಮಾಡಿದ ಮನವಿ ನಿರರ್ಥಕಗೊಂಡ ಹಿನ್ನೆಲೆಯಲ್ಲಿ ಕಲಾಪ ಮುಂದೂಡಲ್ಪಟ್ಟಿತ್ತು.
ತಮ್ಮ ಜೀವಕ್ಕೇನಾದರು ಅಪಾಯವಾದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಲಾಲು, ಮುಲಾಯಂ ಲೋಕಸಭೆಯಲ್ಲಿ ಗುಡುಗಿದ್ದರು. ಬಳಿಕ ಎನ್‌ಎಸ್‌ಜಿ ಭದ್ರತೆಯನ್ನು ವಾಪಸು ಪಡೆಯುವುದಿಲ್ಲ ಎಂಬ ಗೃಹ ಸಚಿವರು ಭರವಸೆ ನೀಡಿದರು. |